'ನಾನು ನಿರ್ದೇಶನ ಮಾಡಲು ಸಾಧ್ಯವಿಲ್ಲ'; ನಟಿ ಕೃತಿ ಸನನ್ ಕೊಟ್ಟ ಕಾರಣ ಹೀಗಿದೆ!

ವಿಜಯವಾಣಿ - 2024-01-09T121234.562
Published on

ಮುಂಬೈ: ಬಾಲಿವುಡ್​ ಅಂಗಳದಲ್ಲಿ ಒಂದರ ಮೇಲೊಂದು ಸಿನಿಮಾ ಮೂಲಕ ಬ್ಯಾಕ್ ಟು ಬ್ಯಾಕ್ ಸಕ್ಸಸ್​ ನೋಡುತ್ತಿರುವ 'ಮಿಮಿ' ನಟಿ ಕೃತಿ ಸನನ್​, ಸದ್ಯ ನಟನೆ, ನಿರ್ಮಾಣದ ಕೆಲಸಗಳಲ್ಲಿ ಹೆಚ್ಚು ಬ್ಯುಸಿಯಾಗುವ ಮುಖೇನ ತಮ್ಮ ಅಭಿಮಾನಿಗಳಿಗೆ ಹೊಸ ಅಪ್ಡೇಟ್​ ನೀಡಲು ಮುಂದಾಗಿದ್ದಾರೆ. ಈ ಮಧ್ಯೆ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಭಾಗಿಯಾದ ಕೃತಿ, ತಾನು ನಿರ್ದೇಶನ ಯಾಕೆ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಸೂಕ್ತ ಕಾರಣ ತಿಳಿಸಿದ್ದಾರೆ.

2014ರಲ್ಲಿ ಟೈಗರ್ ಶ್ರಾಫ್ ಜತೆಗೆ 'ಹೀರೋಪಂತಿ'ಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಕೃತಿ, ಅಂದಿನಿಂದ ಇವತ್ತಿನವರೆಗೂ ಸ್ಟಾರ್​ ನಟರ ಸಿನಿಮಾಗಳು ಸೇರಿದಂತೆ ಹಲವಾರು ವಿಮರ್ಶಾತ್ಮಕ ಮತ್ತು ವಾಣಿಜ್ಯ ಚಿತ್ರಗಳಲ್ಲಿ ಅಭಿನಯಿಸಿ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಈಗ 'ದೋ ಪಟ್ಟಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದು, ಮತ್ತೊಂದು ಪ್ರಶಸ್ತಿ ಗಳಿಸುವತ್ತ ನಟಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಸಂದರ್ಶನದಲ್ಲಿ ಸಿನಿಮಾ ಕುರಿತಂತೆ ಕೇಳಲಾದ ಹಲವು ವಿಷಯಗಳ ಮಧ್ಯೆ ನೀವು ನಟಿಯಾಗಿ, ನಿರ್ಮಾಪಕಿಯಾಗಿ ಕೆಲಸ ಮಾಡಿದ್ದೀರಿ, ಮುಂದೆ ನಿರ್ದೇಶನ ಮಾಡ್ತೀರಾ? ಎಂಬ ಪ್ರಶ್ನೆಗೆ ಕೃತಿ ಕೊಟ್ಟ ಉತ್ತರ ಹೀಗಿದೆ. "ನಾನು ಕ್ಯಾಮೆರಾದ ಮುಂದಿರಲು ತುಂಬಾ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕೆಲಸವು ತುಂಬಾ ಕಷ್ಟಕರವಾಗಿದೆ. ಆ ಒಂದು ಪ್ರಾಜೆಕ್ಟ್‌ನೊಂದಿಗೆ ಹೆಚ್ಚು ಸಮಯ ಉಳಿಯಬೇಕು. ಹಾಗಾಗಿ ಈ ಕೆಲಸವನ್ನು ಮಾಡಲು ಸಾಧ್ಯ ಎಂಬುದನ್ನು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ.

"ಮಿಮಿ ಚಿತ್ರದ ನಿರ್ದೇಶಕರಾದ ಲಕ್ಷ್ಮಣ್ ಉಟೇಕರ್, ಮುಂದೊಂದು ದಿನ ಖಂಡಿತ ನೀನು ಸಿನಿಮಾ ನಿರ್ದೇಶನ ಮಾಡ್ತೀಯಾ ಎಂದು ಹೇಳಿದ್ದರು. ಆದ್ರೆ, ಅದನ್ನು ನಾನು ನಂಬುವುದಿಲ್ಲ" ಎಂದು ಕೃತಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net