

ಬೆಂಗಳೂರು: ಸ್ಟಾರ್ ನಟ, ನಟಿಯರಿಗೆ ಅಭಿಮಾನಿಗಳು ತೋರಿಸುವ ಪ್ರೀತಿ, ಫ್ಯಾನ್ಸ್ಗೆ ಅವರು ತೋರಿಸುವ ಪ್ರೀತಿ ಕೂಡಾ ಅಪಾರವಾಗಿರುತ್ತದೆ. ಬ್ಯುಸಿ ಇರುವ ಕಾರಣದಿಂದ ಕೆಲವೊಮ್ಮೆ ಫ್ಯಾನ್ಸ್ ತೋರಿಸುವ ಪ್ರೀತಿಗೆ ರಿಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಈಗ ಇಂತಹ ಒಂದು ಘಟನೆ ವೈರಲ್ ಆಗಿದೆ.
ನಟ ಕಿಚ್ಚ ಸುದೀಪ್ ಆಗಾಗ್ಗೆ ಟ್ವಿಟ್ಟರ್‌ನಲ್ಲಿ #AskKichcha ಸೆಷನ್ ನಡೆಸಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಫೆಬ್ರವರಿ 25ರಂದು ಕೂಡ ಅದೇ ರೀತಿ ಪ್ರಶ್ನೆಗಳನ್ನು ಕೇಳಲು ಹೇಳಿದ್ದರು. ಪ್ರಶ್ನೆಗಳಿಗೆ ರಿಪ್ಲೇ ಮಾಡಿ ಉತ್ತರಿಸಿದ್ದರು. ನಿಖಿಲ್ ಎಂಬ ಅಭಿಮಾನಿ "ಲವ್ ಯು ಬಾಸ್, ಒಂದೇ ಒಂದು ರಿಪ್ಲೇ ಕೊಡಿ ಸಾಕು" ಎಂದು ಕೇಳಿದ್ದ. ಅಂದು ರಿಪ್ಲೇ ಕೇಳಿದ್ದ ನಿಖಿಲ್‌ಗೆ ಇದೀಗ ಸುದೀಪ್ ರಿಪ್ಲೇ ಮಾಡಿದ್ದಾರೆ.
ಸುದೀಪ್ ಟ್ವೀಟ್ ಮಾಡಿ "ಈ ಸುದ್ದಿ ಕೇಳಲು ನಿಜಕ್ಕೂ ಬೇಸರವಾಗುತ್ತಿದೆ. ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಆತನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನನ್ನ ಸಂತಾಪಗಳು" ಎಂದು ಸುದೀಪ್ ರಿಪ್ಲೇ ಮಾಡಿದ್ದಾರೆ. ಇಂದು ಖುದ್ದು ಸುದೀಪ್ ಆ ಮನವಿಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ರಿಪ್ಲೇ ಮಾಡಿದ ಸಂದರ್ಭ, ಬರೆದ ಸಾಲುಗಳು ಮಾತ್ರ ನೋವು ತರಿಸುವಂತಿದೆ.
ನಿಖಿಲ್ ನಟ ಕಿಚ್ಚ ಸುದೀಪ್ ಅಭಿಮಾನಿ. ನೆಚ್ಚಿನ ನಟನ ಸಿನಿಮಾ ಹಾಗೂ ಇತರೆ ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದ. ಜಮಖಂಡಿ ಮೂಲದ ನಿಖಿಲ್ ಇತ್ತೀಚೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆತನಿಗೆ 22 ವರ್ಷ ವಯಸ್ಸಾಗಿತ್ತು. ಈ ಸುದ್ದಿ ಕೇಳಿ ನಟ ಸುದೀಪ್ ಕೂಡ ಭಾವುಕರಾಗಿದ್ದಾರೆ.
ಅಂದು ರಿಪ್ಲೇ ಕೊಡಿ ಎಂದು ನಿಖಿಲ್ ಕೇಳಿದ್ದ ಕಾಮೆಂಟ್ ಅನ್ನು ರೀಟ್ವೀಟ್ ಮಾಡಿ ಸುದೀಪ್ ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಈ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.