ಪ್ರಭಾಸ್ 'ಪ್ರಾಜೆಕ್ಟ್‌ ಕೆ' ಚಿತ್ರದಲ್ಲಿ ಕಮಲ್ ಹಾಸನ್; ಚಿತ್ರತಂಡದಿಂದ ಅಧಿಕೃತ ಮಾಹಿತಿ

Kamal Haasan
Published on

ಬೆಂಗಳೂರು: ಸ್ಟಾರ್ ನಟರಾದ ಡಾರ್ಲಿಂಗ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ನಟಿಯರಾದ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪ್ರಾಜೆಕ್ಟ್ ಕೆ' ಕುರಿತ ಮತ್ತೊಂದು ಅಪ್​ಡೇಟ್ ಹೊರಬಿದ್ದಿದೆ.

ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿರುವ ಈ ಚಿತ್ರದಲ್ಲಿ ನಟ ಕಮಲ್ ಹಾಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆ ಬಗ್ಗೆ ಸ್ಪೆಷಲ್ ವಿಡಿಯೋ ಝಲಕ್ ಮೂಲಕ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.

'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ಕಮಲ್ ಹಾಸನ್ ಖಳನಾಯಕರಾಗಿ ಪ್ರಭಾಸ್ ಎದುರು ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕಳೆದೊಂದು ತಿಂಗಳಿನಿಂದ ಹರಿದಾಡಿತ್ತು. ಅದರಂತೆ ಈಗ ಚಿತ್ರತಂಡ ಕಮಲ್ ಎಂಟ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದು ತಿಳಿಸಿದೆ.

'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಕಮಲ್ ಹಾಸನ್ ಮಾತನಾಡಿ, ನಾನು 50 ವರ್ಷಗಳ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕ ಆಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್ ಹೆಸರು ದೊಡ್ಡಮಟ್ಟದಲ್ಲಿ ಖ್ಯಾತಿ ಪಡೆದಿತ್ತು. ಐವತ್ತು ವರ್ಷಗಳ ನಂತರ ನಾವು ಒಂದಾಗುತ್ತಿದ್ದೇವೆ. ಇಂದಿನ ಪೀಳಿಗೆಯ ಅದ್ಭುತ ನಿರ್ದೇಶಕ ನಾಗ್ ಅಶ್ವಿನ್, ನಟರಾದ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್ ಅವರ ಜೊತೆ ನಟಿಸುತ್ತಿರುವುದು ಖುಷಿಕೊಟ್ಟಿದೆ. ಪ್ರಾಜೆಕ್ಟ್ ಕೆ ಸಿನಿಮಾಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು.

ಸುದೀರ್ಘವಾದ ವೃತ್ತಿಜೀವನದಲ್ಲಿ ‌ನಿಮ್ಮೊಂದಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. 'ಪ್ರಾಜೆಕ್ಟ್ ಕೆ' ಮೂಲಕ ಅದು ನನಸಾಗಿದೆ. ಕಮಲ್ ಹಾಸನ್-ಅಮಿತಾಬ್ ಬಚ್ಚನ್​ ಜತೆ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಆಶೀರ್ವಾದ ಎಂದು ಅಶ್ವಿನಿ ದತ್ ಹೇಳಿದರು.

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರ್ 'ಪ್ರಾಜೆಕ್ಟ್ ಕೆ' ಸಿನಿಮಾಗೆ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಕಮಲ್ ಹಾಸನ್ ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net