

ತಮಿಳುನಾಡು: ಖ್ಯಾತ ಸಿನಿಮಾ ನಟಿ, ಮಾಜಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕಿಯಾಗಿದ್ದ ಗೌತಮಿ ತಡಿಮಲ್ಲ ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಜೆಪಿ ತ್ಯಜಿಸುವ ಮೂಲಕ ಪಕ್ಷಕ್ಕೆ ಗುಡ್ಬೈ ಹೇಳಿದ್ದರು. ಇದೀಗ ಹೊಸ ವರ್ಷಕ್ಕೆ ಕಾಲಿಟ್ಟ ಬೆನ್ನಲ್ಲೇ ನಟಿ ಹೊಸ ನಿರ್ಧಾರವನ್ನು ಕೈಗೊಂಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿಯಿಂದ ಬೇರ್ಪಟ್ಟ ತಿಂಗಳ ಬಳಿಕ ಗೌತಮಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಭೇಟಿಯಾಗಿದ್ದರು. ತದನಂತರ ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡ ಎಐಎಡಿಎಂಕೆ, "ಬುಧವಾರ, ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಜನಿಸಿದ ಗೌತಮಿ ತಾಡಿಮಲ್ಲ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು ಮತ್ತು ಔಪಚಾರಿಕವಾಗಿ ಎಐಎಡಿಎಂಕೆಗೆ ಸೇರಿದರು" ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತು.
ಮತ್ತೊಂದು ಫೋಟೊವನ್ನು ಹಂಚಿಕೊಂಡ ಪಕ್ಷವು, ಈ ಸಂದರ್ಭದಲ್ಲಿ ನಟಿಗೆ ದಿ ಗ್ರೇಟ್ ತಮಿಳು ಡ್ರೀಮ್ ಪುಸ್ತಕದ ಪ್ರತಿಯನ್ನು ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಚಿತ್ರವನ್ನು ಪಳನಿಸ್ವಾಮಿ ಹಸ್ತಾಂತರಿಸಿರುವುದನ್ನು ತೋರಿಸಿದೆ.
"ಜನರ ಕಲ್ಯಾಣಕ್ಕಾಗಿ ಹೋರಾಡಲು ಎಲ್ಲರನ್ನೂ ಒಗ್ಗೂಡಿಸುವ ಅವರ ಸಾಮರ್ಥ್ಯಕ್ಕಾಗಿ ಅಣ್ಣನ್ ಅವರಿಂದ ನಾನು ಪ್ರಭಾವಿತಳಾಗಿದ್ದೆ. ಇಂದು ನಾನು ಪಕ್ಷಕ್ಕೆ ಸೇರಲು ತುಂಬಾ ಸಂತೋಷವಾಗಿದೆ. ಎಐಎಡಿಎಂಕೆಗೆ ಸೇರುವ ಮೂಲಕ ನಾನು ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಗೌತಮಿ ತಿಳಿಸಿದರು.
"ನಾನು 25 ವರ್ಷಗಳಿಂದ ಬಿಜೆಪಿಯಲ್ಲಿದ್ದೆ ಮತ್ತು ಕೆಲವು ಕಾರಣಗಳಿಂದ ಆ ಪಕ್ಷವನ್ನು ತೊರೆದಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇಂದು ಎಐಎಡಿಎಂಕೆಗೆ ಸೇರಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಗೌತಮಿ ತಡಿಮಲ್ಲ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).