

Actor Dhanush: ತಮ್ಮ ವಿಭಿನ್ನ ಹಾಗೂ ವಿಶೇಷ ಪಾತ್ರಗಳಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ತಮಿಳು ನಟ ಧನುಷ್, ತಮ್ಮ ಮುಂಬರುವ 'ಇಡ್ಲಿ ಕಡಾಯಿ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
'ಇಡ್ಲಿ ಕಡಾಯಿ' ಕುರಿತಂತೆ ಮಾತು ಆರಂಭಿಸಿದ ಧನುಷ್, "ನಮ್ಮ ತಂದೆಯು ಒಬ್ಬ ನಿರ್ದೇಶಕರೇ. ನಾನು 1983ರಲ್ಲಿ ಜನಿಸಿದ್ದು. ಅಪ್ಪ 1991ರಲ್ಲಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಾನು ಹುಟ್ಟಿದ ಸಮಯದಿಂದ ಅಂದರೆ ಆ 8 ವರ್ಷ ನಮ್ಮ ಕುಟುಂಬದಲ್ಲಿ ಭಾರೀ ಆರ್ಥಿಕ ಸಂಕಷ್ಟ ಕಾಡುತ್ತಿತ್ತು. 1995ರ ಬಳಿಕ ನಮ್ಮ ಜೀವನಶೈಲಿ ಕೊಂಚ ಸುಧಾರಣೆ ಕಂಡಿತ್ತು. ಅಲ್ಲಿಯವರೆಗೆ ಬಹಳ ಕಷ್ಟಗಳನ್ನು ಎದುರಿಸಿದೆವು" ಎಂದರು.
"ನಮ್ಮ ಕುಟುಂಬ ಒಂದು ಸಣ್ಣ ಬಜೆಟ್ ಮೇಲೆ ಜೀವನ ನಡೆಸುತ್ತಿತ್ತು. ನನಗೆ ಮತ್ತು ನನ್ನ ಸಹೋದರರಿಗೆ ಮನೆಯ ಕಷ್ಟಗಳು ಅರ್ಥವಾಗಿತ್ತು. ಹೀಗಾಗಿಯೇ, ಆದಷ್ಟು ಸಣ್ಣಪುಟ್ಟ ಕೆಲಸಗಳನ್ನು ಸ್ವತಃ ನಾವೇ ಹುಡುಕಿಕೊಂಡು ಮಾಡುತ್ತಿದ್ದೆವು. ಹೊಲಗಳಲ್ಲಿ ಕೆಲಸ ಮಾಡುತ, ಹೂವುಗಳನ್ನು ಮಾರುತ, ಅದರಲ್ಲಿ ಬಂದ ಒಂದೆರೆಡು ರೂಪಾಯಿಯಲ್ಲಿ 4ರಿಂದ 5 ಇಡ್ಲಿಯನ್ನು ಖರೀದಿಸಿ, ತಿನ್ನುತ್ತಿದ್ದೆವು. ಆಗ ಸಿಗುತ್ತಿದ್ದ ತೃಪ್ತಿ, ಖುಷಿ ಈಗ ರೆಸ್ಟೋರೆಂಟ್ನಲ್ಲಿ ಊಟ ಸವಿದರೂ ಸಿಗ್ತಿಲ್ಲ" ಎಂದು ಧನುಷ್ ಹೇಳಿದ್ದಾರೆ.
ಸ್ವತಃ ಧನುಷ್ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ತಮಿಳು ಭಾಷೆಯ 'ಇಡ್ಲಿ ಕಡೈ' ಚಿತ್ರವು ಮುರುಗನ್ ಎಂಬ ಹೋಟೆಲ್ ಉದ್ಯೋಗಿಯ ಕಥೆಯನ್ನು ಹೊತ್ತು ಸಾಗಲಿದೆ. ಈ ಚಿತ್ರದಲ್ಲಿ ಧನುಷ್, ನಿತ್ಯಾ ಮೆನನ್, ಅರುಣ್ ವಿಜಯ್, ಸತ್ಯರಾಜ್, ಆರ್. ಪಾರ್ಥಿಬನ್, ಶಾಲಿನಿ ಪಾಂಡೆ, ಪಿ. ಸಮುತಿರಕಣಿ, ರಾಜ್‌ಕಿರಣ್, ಗೀತಾ ಕೈಲಾಸಂ ಸೇರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಅಕ್ಟೋಬರ್ 1ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ,(ಏಜೆನ್ಸೀಸ್).