10 ಕೆಜಿ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಅನ್ನೋದು ತಪ್ಪು: ನಟ ಧನಂಜಯ್​ ಹೇಳಿಕೆ

Dhananjay
Published on

ಮಂಡ್ಯ: ತಿಂಗಳ ಆದಾಯ ಕಡಿಮೆ ಇರುವವರಿಗೆ ಹಸಿವು ನೀಗಿಸಲು 10 ಕೆಜಿ ಅಕ್ಕಿ ಕೊಟ್ಟರೆ ಅದು ತಪ್ಪಾಗಿ ಕಾಣುವುದಿಲ್ಲ. ಅದರಿಂದ ಜನ ಸೋಮಾರಿಗಳಾಗುತ್ತಾರೆ ಅನ್ನೋದು ತಪ್ಪು ಎಂದು ನಟ ಡಾಲಿ ಧನಂಜಯ್​ ಅಭಿಪ್ರಾಯಪಟ್ಟರು.

ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ

ಮಂಡ್ಯದ ಚಲುವರಸನಕೊಪ್ಪಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನ ಉಚಿತ ಭಾಗ್ಯಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಧನಂಜಯ್​, ಸುಮ್ಮನೆ ನನಗೆ ರಾಜಕೀಯ ಕೇಳಿ ಸಿಲುಕಿಸುತ್ತೀರಿ. ನಾನು ಯಾವುದೇ ಪಕ್ಷದ ಪರ ಇಲ್ಲ ಮತ್ತು ವಿರೋಧವಾಗಿಯೂ ನಾನು ಮಾತನಾಡಲ್ಲ. ಸಾಮಾನ್ಯ ಮನುಷ್ಯನಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ. ತಿಂಗಳ ಆದಾಯ ಕಡಿಮೆ ಇರುವವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ. ಅದರಿಂದ ಜನ ಸೊಂಬೇರಿ ಆಗ್ತಾರೆ ಅಂದ್ರೆ ತಪ್ಪು. ತಿಂಗಳಿಗೆ 10 ಕೆಜಿ‌ ಅಕ್ಕಿ ಕೊಟ್ಟರೆ ಅಡುಗೆ ಮಾಡಿ, ಊಟ ಮಾಡಿಕೊಂಡು ಮನೆಯಲ್ಲಿ ಇರೋಕೆ ಆಗಲ್ಲ. ಅಕ್ಕಿ ಕೊಟ್ಟರೆ ಹಸಿವನ್ನು ನೀಗಿಸುತ್ತದೆ. ಇತರೆ ಖರ್ಚಿಗೆ ಜನ ದುಡಿಯುತ್ತಾರೆ. ಬಡ ಮನುಷ್ಯನಿಗೆ ಅಕ್ಕಿ ಕೊಟ್ಟರೆ ಸೊಂಬೇರಿ ಆಗ್ತಾನೆ ಎನ್ನೋದು ತಪ್ಪು. ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಎಂದರು.

ಶಾಲೆಗೆ ಚಾಲನೆ

ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ನವೀಕರಣಗೊಂಡಿದ್ದು, ಇಂದಿನಿಂದ ಶಾಲೆ ಪ್ರಾರಂಭ ಹಿನ್ನೆಲೆ ಟೇಪ್ ಕತ್ತರಿಸಿ, ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಧನಂಜಯ್​ ಶಾಲೆಗೆ ಚಾಲನೆ ನೀಡಿದರು. ಬಳಿಕ ಶಾಲೆ ವೀಕ್ಷಣೆ ಮಾಡಿ ನವೀಕರಣ ಮಾಡಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು

ಸರ್ಕಾರಿ‌ ಶಾಲೆಗೆ ಬಂದು‌ ನನಗೆ ತುಂಬಾ ಖುಷಿ‌ ಆಯ್ತು. ಎಲ್ಲ ಮಕ್ಕಳಿಗೂ‌ ಒಂದೇ ರೀತಿಯ ಸವಲತ್ತುಗಳು ಇರಲ್ಲ. ಸಾಕಷ್ಟು ಮಕ್ಕಳು ಶಾಲೆಯಿಂದ ಬಿಟ್ಟು ಹೋಗ್ತಾರೆ. ಅವರನ್ನು‌ ಮತ್ತೆ ಕರೆತರಬೇಕು. ಮಕ್ಕಳು ಹಾಗೂ ಮೂಲಸೌಕರ್ಯಗಳು ಇಲ್ಲದೆ ಸರ್ಕಾರಿ ಶಾಲೆಗಳು‌ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಓದಬೇಕೆಂದು‌ ತುಂಬಾ ಜನ ಅಂದುಕೊಂಡಿದ್ದಾರೆ. ಓದಿಗೆ ದೊಡ್ಡ ಶಾಲೆ, ಸರ್ಕಾರಿ ಶಾಲೆ ಅಂತಾ ಇಲ್ಲ. ಸರ್ಕಾರಿ ಶಾಲೆಗಳಲ್ಲಿ‌ಯೂ ಉತ್ತಮ ಶಿಕ್ಷಣ ಸಿಗುತ್ತಿದೆ. ಒಂದು ಕ್ಷೇತ್ರದಲ್ಲಿ ಎಲ್ಲವೂ ಸರಿ ಇರಲ್ಲ. ನ್ಯೂನತೆಗಳನ್ನು ಸರಿ ಮಾಡಿಕೊಂಡು ಉತ್ತಮ ಶಿಕ್ಷಣ ಕೊಡಬೇಕು ಎಂದರು.

ಈ ರೀತಿಯ ಮಾದರಿ ಶಾಲೆಗಳು ಎಲ್ಲ‌ ಹಳ್ಳಿಗಳಲ್ಲೂ ಇರಬೇಕು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿನ ಶಿಕ್ಷಕರು ನನ್ನ ಶಾಲೆ ಎಂದು ಅಂದುಕೊಳ್ಳುತ್ತಾರೆ. ಇದರಿಂದ ಸರ್ಕಾರಿ‌ ಶಾಲೆಗಳು ಉತ್ತಮವಾಗುತ್ತವೆ ಎಂದು ತಿಳಿಸಿದರು.

ಅಂದಹಾಗೆ ಧನಂಜಯ್​ ಅವರು ಇಂದು ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿ 10ನೇ ವರ್ಷ ಪೂರೈಸಿದ್ದಾರೆ. ಹೀಗಾಗಿ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳು ಧನಂಜಯ್​ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net