

ಆಂಧ್ರಪ್ರದೇಶ: ಜಾಗತಿಕವಾಗಿ ಜೂ. 27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್ ಸ್ಟಾರ್, ನಟ ಪ್ರಭಾಸ್ ಅಭಿನಯದ ಸೈನ್ಸ್ ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಾವಿರ ಕೋಟಿ ಕ್ಲಬ್ ಸೇರಿದ ಕಲ್ಕಿ ಈಗ ಟಾಲಿವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು, ಪ್ರಭಾಸ್ ಸಿನಿ ಕರಿಯರ್ಗೆ ಸಖತ್ ಮೈಲೇಜ್ ಕೊಟ್ಟಿದೆ.
ಇದನ್ನೂ ಓದಿ: ಎಣ್ಮಕಜೆ ಗ್ರಾಪಂ ಕೃಷಿಕರ ದಿನಾಚರಣೆ
ಸಿನಿಮಾ ಬಿಡುಗಡೆಯ ಮುನ್ನವೇ ಇದು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆ ಗಳಿಸಲಿದೆ ಎಂದು ಚಿತ್ರತಂಡ ಸೇರಿದಂತೆ ಪ್ರಭಾಸ್ ಅಭಿಮಾನಿಗಳು ಭಾರೀ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದರು. ಭರವಸೆಗಳಿಗೆ ತಕ್ಕಂತೆಯೇ ಚಿತ್ರವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದ್ದು, ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಗಳಿಸಿ, ಇದೀಗ ಟಾಪ್ ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗೆ ಲಗ್ಗೆಯಿಟ್ಟಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ರಂತಹ ಸ್ಟಾರ್ ನಟರ ಪಾತ್ರಗಳ ಮಧ್ಯೆ ಕೌನ್ಸಿಲರ್ ಬಾನಿ ಪಾತ್ರದಲ್ಲಿ ಮಿಂಚಿದ ಅನಿಲ್ ಜಾರ್ಜ್ ಅವರ ಬಗ್ಗೆ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಈ ಚಿತ್ರದಲ್ಲಿ ಅವಕಾಶ ಪಡೆದ ಅನಿಲ್, ತಾವು ಮಾಡಿದ್ದ ಪ್ರಮಾಣವನ್ನು ಕಡೆಗೂ ಕಲ್ಕಿ ಮೂಲಕ ಮುರಿದಿದ್ದೇ ರೋಚಕ. ಸ್ವತಃ ಅವರೇ ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಈವರೆಗೂ ಯಾವ ಚಿತ್ರಕ್ಕೂ ಗಡ್ಡ ಬೋಳಿಸದ ನಟ ಅನಿಲ್, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ' ಚಿತ್ರಕ್ಕಾಗಿ ದಾಡಿ ತೆಗೆದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, "ಅತಿಯಾದ ಸಂತೋಷ ಮತ್ತು ಉತ್ಸಾಹ ಇವೆರೆಡು ನನ್ನನ್ನು ಬಲಿ ಪಡೆಯಬಾರದು ಎನ್ನುವ ವ್ಯಕ್ತಿ ನಾನು. ನನಗೆ ದಿಗ್ಗಜ ನಟ ಕಮಲ್ ಹಾಸನ್ ಅವರೊಂದಿಗೆ ತೆರೆ ಹಂಚಿಕೊಳ್ಳಬೇಕು ಎಂಬ ಮಹಾದಾಸೆಯಿತ್ತು. ಆದ್ರೆ, ಎಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. ಆ ಅವಕಾಶ ಮಾಡಿಕೊಟ್ಟಿದ್ದು ಕಲ್ಕಿ" ಎಂದರು.
"ಕಲ್ಕಿಯಲ್ಲಿ ನನ್ನ ನೆಚ್ಚಿನ ಹೀರೋ ಕಮಲ್ ಹಾಸನ್ ಅವರ ಜತೆ ಸ್ಕ್ರೀನ್ ಹಂಚಿಕೊಂಡಿದ್ದ ನನ್ನ ಪುಣ್ಯ. ಆಗಾಗ್ಗೆ ಸೆಟ್ಗೆ ಅವರಿದ್ದ ವೇಳೆಗೆ ಬರುತ್ತಿದದ್ದು, ನನ್ನಲ್ಲಿದ್ದ ಉತ್ಸಾಹವನ್ನು ಹೆಚ್ಚಿಸುತ್ತಿತ್ತು. ಅವರ ಅನೇಕ ಸಿನಿಮಾಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಕಮಲ್ರ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಹರಿಸಿದಾಗ ಅಬ್ಬಬ್ಬಾ! ಎಂತಹ ಅಮೋಘ ಅಭಿನಯ ಅನಿಸಿದ್ದು ನಿಜ. ಇಂತಹ ಮೇರು ನಟನೊಂದಿಗೆ ನಟಿಸುವ ಅವಕಾಶ ಸಿಗಬೇಕು ಎಂದು ಒಂದೊಳ್ಳೆ ಸಮಯಕ್ಕಾಗಿ ಕಾದಿದ್ದೆ. ಇದೇ ಕಾರಣಕ್ಕೆ ನಾನು ಗಡ್ಡ ತೆಗೆದಿರಲಿಲ್ಲ. ಕಲ್ಕಿಯಲ್ಲಿ ಪಾತ್ರ ಸಿಕ್ಕಿದ್ದೇ ತಡ ನನ್ನ ದೊಡ್ಡ ದಾಡಿಗೆ ಕತ್ತರಿ ಹಾಕುವ ಸಮಯ ಕಡೆಗೂ ಒಲಿಯಿತು ಎಂದು ಭಾವಿಸಿ, ಶೇವ್ ಮಾಡಿಸಿದೆ" ಎಂದು ಅನಿಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).