

ಸಂದೀಪ್ ಸಾಲ್ಯಾನ್ ಬಂಟ್ವಾಳ
ನಾಲ್ಕು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಮಳೆ ಕ್ಷೀಣವಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಧೂಳು ತುಂಬಿಕೊಂಡಿದೆ. ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ಕೆಸರಿನಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದ ಪ್ರಯಾಣಿಕರು, ವಾಹನ ಸವಾರರು, ಪಾದಚಾರಿಗಳು ಈಗ ಧೂಳಿನ ಸಮಸ್ಯೆ ಅನುಭವಿಸುವಂತಾಗಿದೆ.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಚತುಷ್ಪಥ ಹೆದ್ದಾರಿ ನಿರ್ಮಾಣ ಕೆಲಸ ನಡೆಯುತ್ತಿದೆ. ಅಲ್ಲಿಂದಲೇ ಧೂಳಿನ ಸಮಸ್ಯೆ ಆರಂಭಗೊಂಡಿದೆ. ಇದು ಹೆದ್ದಾರಿಯುದ್ದಕ್ಕೂ ಮುಂದುವರಿದಿದೆ. ಭಾರಿ ವಾಹನಗಳು ಸಂಚರಿಸುವ ವೇಳೆ ರಸ್ತೆ ತುಂಬಾ ಧೂಳು ತುಂಬಿಕೊಂಡು ಊರೇ ಮುಚ್ಚಿ ಹೋಗುತ್ತದೆ. ಇದರ ಹಿಂದೆ ಸಂಚರಿಸುವ ವಾಹನಗಳಿಗೆ ರಸ್ತೆಯೇ ಕಾಣಿಸದೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಧೂಳಿನಿಂದಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರ ವಸ್ತ್ರ ಬಣ್ಣ ಬದಲಾಯಿಸಿಕೊಂಡರೆ, ಉಬ್ಬಸ ರೋಗಿಗಳು, ಉಸಿರಾಟದ ತೊಂದರೆಯಿರುವವರು, ಸಣ್ಣ ಮಕ್ಕಳು ತೀವ್ರ ಸಮಸ್ಯೆ ಅನುಭವಿಸ ಬೇಕಾಗಿದೆ.
ರಸ್ತೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಕೆಎಸ್‌ಆರ್ ಸಂಸ್ಥೆ ನೀರು ಹಾಕಿ ಧೂಳಿನ ಸಮಸ್ಯೆಗೆ ಮುಕ್ತಿ ನೀಡಬೇಕೆನ್ನುವ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ. ಸೋಮವಾರ ಮೆಲ್ಕಾರ್ ಪರಿಸರದಲ್ಲಿ ಸಾರ್ವಜನಿಕರು ವಾಹನಗಳನ್ನು ತಡೆಹಿಡಿದು ಗುತ್ತಿಗೆ ಸಂಸ್ಥೆಗೆ ಬಿಸಿ ಮುಟ್ಟಿಸಿದ್ದಾರೆ. ಈ ಸಮಸ್ಯೆ ಬಿ.ಸಿ.ರೋಡು ಮುಖ್ಯ ವೃತ್ತ, ಪಾಣೆಮಂಗಳೂರು, ಬೋಳಂಗಡಿ, ಕಲ್ಲಡ್ಕ, ಮಾಣಿಯಲ್ಲೂ ಇದ್ದು ವಾಹನ ಸವಾರರು, ಪ್ರಯಾಣಿಕರು, ಪಾದಚಾರಿಗಳಿಗೆ ಮಾತ್ರವಲ್ಲದೆ ಸ್ಥಳೀಯ ಅಂಗಡಿಗಳಲ್ಲಿಯೂ ಧೂಳು ತುಂಬಿಕೊಂಡು ವ್ಯಾಪಾರ ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಹಣ್ಣು, ತರಕಾರಿ, ತಿಂಡಿ ತಿನಿಸುಗಳಲ್ಲಿ ಧೂಳು ಮೆತ್ತಿಕೊಂಡು ಅವುಗಳನ್ನು ನಿರ್ವಹಣೆ ಮಾಡುವುದೇ ಸಾಹಸದ ಕೆಲಸವಾಗಿದೆ. ರಸ್ತೆ ಪಕ್ಕದ ಮನೆಗಳಲ್ಲಿ ಧೂಳು ಆವರಿಸಿಕೊಂಡು ಧೂಳಿನಿಂದ ರಕ್ಷಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ಧೂಳಿನ ಸಮಸ್ಯೆಯಿಂದ ನಾಗರಿಕರು ರೋಸಿ ಹೋಗಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ಮೂಲಕ ನೀರು ಹಾಕುವಂತೆ ಗುತ್ತಿಗೆ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಗೊಂಡ ಬಳಿಕ ಸರಿಯಾದ ರಸ್ತೆಯಿಲ್ಲದೆ ಹೆದ್ದಾರಿಯಲ್ಲಿ ಪ್ರಾಣವನ್ನು ಕೈಯಲ್ಲಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಳೆಗಾಲದಲ್ಲಿ ಕೆಸರು, ಮಳೆ ನಿಂತರೆ ಧೂಳು. ಇದರಿಂದ ಪ್ರಯಾಣಿಕರು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅಂಗಡಿ ವ್ಯಾಪಾರಿಗಳಿಗೆ, ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯೂ ಧೂಳಿನಿಂದ ಸಮಸ್ಯೆ ಅನುಭವಿಸುವಂತಾಗಿದೆ. - ಶಶಿಧರ ಪಾಣೆಮಂಗಳೂರು, ರಸ್ತೆ ಪ್ರಯಾಣಿಕ