ಹುಡ್ಗಿ ಕೈ ಕೊಟ್ಲು, ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದ ನಟ ಅಬ್ಬಾಸ್

abbas
Published on

- 10ನೇ ತರಗತಿ ಫೇಲ್ ಆಗಿದ್ದರಿಂದ ನನ್ನ ಗೆಳತಿ ಬಿಟ್ಟು ಹೋದಳು

ಮುಂಬೈ: ನಟ ಅಬ್ಬಾಸ್‌ ತಮಿಳು ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚಿದವರು. ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಒಂದ್ಕಾಲದಲ್ಲಿ  ಆತನ ಲುಕ್ಸ್, ಸ್ಟೈಲ್‌ಗೆ ಒಂದ್ಕಾಲದಲ್ಲಿ ಯುವಕ, ಯುವತಿಯರು ಫಿದಾ ಆಗಿದ್ದರು. ಆದರೆ ಈ ನಟ ಈಗ ಅವರ ಜೀವನದಲ್ಲಿ ನಡೆದ ಘಟನೆಯೊಂದರ ಕುರಿತಾಗಿ ಹೇಳಿಕೊಂಡಿದ್ದಾರೆ.

1996ರಲ್ಲಿ ಬಂದ 'ಕಾದಲ್ ದೇಶಂ' ಸಿನಿಮಾದಿಂದ ರಾತ್ರೋರಾತ್ರಿ ಅಬ್ಬಾಸ್ ಸ್ಟಾರ್ ಆಗಿಬಿಟ್ಟಿದ್ದರು. ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರಾಗಿದ್ದ ನಟ ಇದೀಗ ಕಂಬ್ಯಾಕ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಹದಿಹರೆಯದವರಾಗಿದ್ದಾಗಲೇ ತಮ್ಮ ಜೀವನವನ್ನು ಕೊನೆಗೊಳಿಸಲು ಬಯಸಿದ್ದರು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಟೀನೇಜ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "10ನೇ ತರಗತಿಯಲ್ಲಿ ಫೇಲ್ ಆಗಿದ್ದೆ. ನನ್ನ ಗರ್ಲ್‌ಫ್ರೆಂಡ್ ಕೈ ಕೊಟ್ಲು. ಆ ವಯಸ್ಸಿನಲ್ಲಿ ಏನು ಮಾಡೋದು ಗೊತ್ತಿಲ್ಲದೇ ಗೊಂದಲದಲ್ಲಿದ್ದೆ. ಜೀವನವೇ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ" ಎಂದು ಹೇಳಿದ್ದಾರೆ.

2015ರ ನಂತರ ಭಾರತ ಬಿಟ್ಟು ಮಡದಿ ಸಮೇತ ಅಬ್ಬಾಸ್ ನ್ಯೂಜಿಲೆಂಡ್‌ಗೆ ಹೋಗಿ ಸೆಟ್ಲ್ ಆಗಿದ್ದರು. ಅಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಭಾರತಕ್ಕೆ ವಾಪಸ್ ಆಗಿರುವ ಅಬ್ಬಾಸ್ ಗಲಾಟೆ ಪ್ಲಸ್ ಯೂಟ್ಯೂಬ್ ಚಾನಲ್‌ ಸಂದರ್ಶನದಲ್ಲಿ ಭಾಗಿ ಆಗಿದ್ಧಾರೆ.

"ನನ್ನ ಜೀವನದಲ್ಲಿ ಎಲ್ಲಾ ಮುಗೀತು, ನಾನು ನನ್ನ ಜೀವ ಕಳೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಸಾಯೋಣ ಎಂದು ಹೋದಾಗ ನನ್ನ ನನ್ನಲ್ಲಿ ಬದಲಾವಣೆ ತಂದಿದ್ದು ಒಂದು ಮೋಟಾರ್ ಸೈಕಲ್. ನಾನು ಹೈವೇಗೆ ಹೋಗಿ ದೊಡ್ಡ ಟ್ರಕ್‌ಗೆ ಸಿಕ್ಕಿ ಸಾಯಲು ನಿರ್ಧರಿಸಿದೆ. ಇನ್ನೇನು ನಾನು ಟ್ರಕ್‌ಗೆ ಅಡ್ಡ ಹೋಗಬೇಕು ಎಂದುಕೊಂಡಾಗ ಆ ಟ್ರಕ್ ಹಿಂದೆ ಒಂದು ಮೋಟಾರ್ ಸೈಕಲ್ ಬರೋದು ನೋಡಿದೆ. ಅರೇ ನಾನು ಟ್ರಕ್‌ಗೆ ಅಡ್ಡ ಹೋದರೆ, ಡ್ರೈವರ್ ಬ್ರೇಕ್ ಹಾಕಿದ್ರೆ, ಟ್ರಕ್ ಹಿಂದೆ ಬರುತ್ತಿರುವ ಮೋಟರ್ ಸೈಕಲ್ ಸವಾರ ಸಾಯುತ್ತಾನಲ್ಲ ಎಂದು ಅನಿಸಿತು. ಆ ಕ್ಷಣದಲ್ಲೇ ನಾನು ಆತ್ಮಹತ್ಯೆ ನಿರ್ಧಾರ ಕೈಬಿಟ್ಟೆ" ಎಂದಿದ್ದಾರೆ.

ಕನ್ನಡದಲ್ಲಿ 'ಶಾಂತಿ ಶಾಂತಿ ಶಾಂತಿ', 'ಹಲೋ', 'ಅಪ್ಪು ಅಂಡ್ ಪಪ್ಪು' ಹಾಗೂ 'ಸವಾರಿ- 2' ಸಿನಿಮಾಗಳಲ್ಲಿ ಅಬ್ಬಾಸ್ ಬಣ್ಣ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net