

ಸಾಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕಲಾಪ ನಡೆಯುತ್ತಿರುವಾಗ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿರುವುದು ಅಕ್ಷಮ್ಯ. ಇದು ಸಂವಿಧಾನದ ಮೇಲೆ ನಡೆದ ದಾಳಿ. ದಲಿತರೊಬ್ಬರು ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ಕುಳಿತಿರುವುದನ್ನು ದೇಶದಲ್ಲಿ ಸಂವಿಧಾನವನ್ನು ವಿರೋಧಿಸಿಕೊಂಡು ಬಂದವರು ಯಾವತ್ತೂ ಒಪ್ಪುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದರು.
ವಕೀಲರೊಬ್ಬರು ಚಪ್ಪಲಿ ಎಸೆಯುವ ಪ್ರಯತ್ನ ನಡೆಸಿರುವುದು ಸಂವಿಧಾನ ವಿರೋಧಿಗಳ ಮುಖವಾಡ ಕಳಚಿದಂತೆ ಆಗಿದೆ. ತಕ್ಷಣ ಚಪ್ಪಲಿ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಸಂಚಾಲಕ ನಾಗರಾಜ್, ನಾರಾಯಣ, ಸುಂದರ ಸಿಂಗ್, ಈಶ್ವರ್, ಬಂಗಾರಪ್ಪ, ವೆಂಕಟೇಶ್, ಮಂಜುನಾಥ್ ಇತರರಿದ್ದರು.