

ಬೆಂಗಳೂರು: ಮಹಾಮಾರಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದ್ದಂತೆ ಜನರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕುಟುಂಬ ಸದಸ್ಯರ ಕಷ್ಟಕ್ಕೂ ಕೈ ಚಾಚುತ್ತಿಲ್ಲ, ಸಾವು-ನೋವಿನಲ್ಲೂ ಭಾಗಿಯಾಗುತ್ತಿಲ್ಲ... ಎಂಬ ಆತಂಕಕಾರಿ ವಾತಾವರಣದ ನಡುವೆಯೂ ಒಳ್ಳೆತನ-ಸಹಾಯ ಗುಣ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಎಸಿಪಿ ಎಂ.ಸತೀಶ್.
ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಗುಣಮುಖರಾದ ಯಲಹಂಕ ಉಪ ವಿಭಾಗ(ಸಂಚಾರ) ಎಸಿಪಿ ಸತೀಶ್, ಪ್ಲಾಸ್ಮಾ ದಾನ ಮಾಡಿದ್ದಾರೆ. ಆ ಮೂಲಕ 'ಪ್ಲಾಸ್ಮಾ ದಾನ ಮಾಡಿದ ಮೊದಲ ಸರ್ಕಾರಿ ಅಧಿಕಾರಿ' ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಇದನ್ನೂ ಓದಿರಿ ಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ
'ಜೂನ್ 28ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಶಂಕುಸ್ಥಾಪನೆ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ಐದು ದಿನ ಮಾತ್ರ ಬಾಕಿ ಇದ್ದವು. ಪೂರ್ವ ಸಿದ್ಧತೆ ಕುರಿತು ಆಯುಕ್ತರ ಕಚೇರಿಯಲ್ಲಿ ಸಭೆ ಮುಗಿಸಿ ಮನೆಗೆ ಹೋಗುವಾಗ ಚಳಿ ಕಾಣಿಸಿಕೊಂಡಿತು. ಎಚ್ಚೆತ್ತು ಮರುದಿನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೊಳಗಾದೆ. ವರದಿ ಬರುವುದು ತಡವಾಯಿತು. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮವೂ ಮುಗಿಯಿತು. ನನ್ನಲ್ಲಿ ಜ್ವರ ಸಹ ಮಾಯವಾಗಿತ್ತು. ಐದು ದಿನಗಳ ಬಳಿಕ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ನನ್ನಲ್ಲಿ ಆತಂಕ, ಭೀತಿ, ಭಯ ಕಾಣಲಿಲ್ಲ. ಧೈರ್ಯವಾಗಿಯೇ ಇದ್ದೆ' ಎಂದು ಸತೀಶ್ ತನಗೆ ಸೋಂಕು ತಗುಲಿದ್ದ ಸಂದರ್ಭವನ್ನು ವಿವರಿಸಿದರು.
'ಕರೊನಾಗೆ ಇನ್ನೂ ಔಷಧ ಪತ್ತೆಯಾಗಿಲ್ಲ. ಪ್ಲಾಸ್ಮಾವೇ ಸದ್ಯದ ಮದ್ದಾಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲಿ. ಒಬ್ಬ ವ್ಯಕ್ತಿಯ ಪ್ಲಾಸ್ಮಾದಿಂದ ಐಸಿಯುನಲ್ಲಿರುವ ಇಬ್ಬರು ಸೋಂಕಿತರನ್ನು ಆರೈಕೆ ಮಾಡಬಹುದು. ನನ್ನಿಂದ ಸಹೋದ್ಯೋಗಿಗಳ (ಪೊಲೀಸರು) ಪ್ರೇರೇರಿತರಾಗುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಉಪ ವಿಭಾಗದ ಐವರು ಐಸೋಲೇಷನ್ನಲ್ಲಿದ್ದಾರೆ. ಅವರಿಂದ ಪ್ಲಾಸ್ಮಾ ದಾನ ಮಾಡಿಸುವೆ' ಎಂದು ಸತೀಶ್ ತಿಳಿಸಿದರು.
'ಕರೊನಾಗೆ ಅಂಜುವ ಅಗತ್ಯವಿಲ್ಲ. ಮನಸ್ಸಿನಲ್ಲಿ ಬಲವಾದ ಆತ್ಮವಿಶ್ವಾಸವಿದ್ದರೆ ಸೋಂಕು ಏನೂ ಮಾಡುವುದಿಲ್ಲ. ರೋಗದಿಂದ ಗುಣವಾಗುದಷ್ಟೆ ಮುಖ್ಯವಲ್ಲ. ಪ್ರಸುತ್ತ ಸಂಕಷ್ಟದ ಪರಿಸ್ಥಿಯನ್ನರಿತು ಸೋಂಕು ಮುಕ್ತರಾದವರು ಪ್ಲಾಸ್ಮಾ ದಾನ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು' ಎಂದು ಎಸಿಪಿ ಸತೀಸ್ ಮನವಿ ಮಾಡಿದರು.