

ವಾಷಿಂಗ್ಟನ್: ಯಾರಿಗೆ? ಯಾರ ಮೇಲೆ? ಯಾವಾಗ ಪ್ರೇಮಾಂಕುರವಾಗುತ್ತದೆ ಎಂದು ಹೇಳಲಾಗದು. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಇಲ್ಲೊಬ್ಬ ಆರೋಪಿಗೆ ಜಡ್ಜ್ ಮೇಲೆಯೇ ಪ್ರೀತಿಯಾಗಿದ್ದು, ವಿಚಾರಣೆ ವೇಳೆಯೇ ಪ್ರೇಮ ನಿವೇದನೆ ಮಾಡಿರುವ ವಿರಳಾತಿವಿರಳ ಘಟನೆ ಅಮೆರಿಕದಲ್ಲಿ ನಡೆದಿದೆ.
ಪ್ರೇಮ ನಿವೇದನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಲ್ಲದೆ, ಆರೋಪಿಯ ಎದೆಗಾರಿಕೆ ಕಂಡು ಹುಬ್ಬೇರಿಸುತ್ತಿದ್ದಾರೆ. ಜಡ್ಜ್ ಪ್ರತಿಕ್ರಿಯೆಗೂ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಗೆ ಶಿಕ್ಷೆ ಪ್ರಕಟಿಸುವ ಸಮಯದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಜಡ್ಜ್ ಉದ್ದೇಶಿಸಿ ನೀವು ಸುಂದರವಾಗಿದ್ದೀರಾ... ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಆರೋಪಿ ಪ್ರೇಮ ನಿವೇದನೆ ಮಾಡಿದ್ದಾನೆ.
ಘಟನೆಯ ವಿವರಣೆಗೆ ಬರುವುದಾದರೆ, ಆರೋಪಿ ಡೆಮೆಟ್ರಿಸ್ ಲೂಯಿಸ್ ಎಂಬಾತ ಬ್ರೊವಾರ್ಡ್ ಕೌಂಟಿ ಜಡ್ಜ್ ತಬಿತಾ ಬ್ಲ್ಯಾಕ್ಮನ್ರವರು ಜೂಮ್ ಕಾಲ್ ಮೂಲಕ ಗುರುವಾರ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮನೆಯೊಂದರ ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಲೂಯಿಸ್ ವಿಚಾರಣೆ ಎದುರಿಸಿದ್ದ. ಈ ವೇಳೆ ಜಡ್ಜ್ ತಬಿತಾ ಅವರು ಶಿಕ್ಷೆ ಪ್ರಮಾಣ ಪ್ರಕಟಿಸುವ ಮುನ್ನವೇ ಮಾತು ಆರಂಭಿಸಿದ ಆರೋಪಿ ಲೂಯಿಸ್, ಜಡ್ಜ್ ನೀವು ತುಂಬಾ ಸುಂದರವಾಗಿದ್ದೀರಾ. ನಾನು ಏನು ಹೇಳುತ್ತೇನೆಂದರೆ ನಿಜಕ್ಕೂ ನೀವು ಸೌಂದರ್ಯವತಿ. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಎರಡು ಬಾರಿ ಐ ಲವ್ ಯು ಎಂದಿದ್ದಾನೆ.
ಆರೋಪಿ ಲೂಯಿಸ್ ಅತಿ ಹೊಗಳಿಕೆಗೆ ಮರುಳಾಗದ ತಬಿತಾ ಅವರು ಎರಡು ಸೆಕೆಂಡ್ ಸುಮ್ಮನ್ನೇ ನಕ್ಕು ತಮ್ಮ ಕರ್ತವ್ಯ ಮುಂದುವರಿಸಿದರು. ನಿಮ್ಮ ಹೊಗಳಿಕೆ ಎಲ್ಲೆಡೆ ನಡೆಯುತ್ತದೆ. ಆದರೆ ಬಹುಶಃ ಇಲ್ಲಿ ನಡೆಯುವುದಿಲ್ಲ ಎಂದು ಲೂಯಿಸ್ ಕೇಸ್ ಫೈಲ್ಗಳನ್ನು ಪರಿಶೀಲಿಸುತ್ತಾ ಜಡ್ಜ್ ತಬಿತಾ ಅವರು ಪ್ರತಿಕ್ರಿಯಿಸಿದರು.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಲೂಯಿಸ್ ಈಗಾಗಲೇ ನಾಲ್ಕು ವರ್ಷಗಳ ಜೈಲುವಾಸವನ್ನು ಅನುಭವಿಸಿ 2019ರಲ್ಲಿ ಬಿಡುಗಡೆಯಾಗಿದ್ದಾನೆ. ಇದೀಗ ಮತ್ತೆ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದು, ಶಿಕ್ಷೆಗೆ ಗುರಿಯಾಗಿದ್ದಾನೆ.
ಇನ್ನು ಜಡ್ಜ್ ಮತ್ತು ಆರೋಪಿ ನಡುವಿನ ಸಂಭಾಷಣೆ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)