

ತಿರುವನಂತಪುರಂ: ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಆಗಾಗ ಹೇಳುತ್ತಾರೆ. ಆದರೆ, ಇಲ್ಲಿಯೂ ಮದುವೆ ನಿಶ್ಚಯ ಆಗಬಹುದೆಂದು ಗೊತ್ತಾಗಿದ್ದೇ ಈ ಸ್ಟೋರಿ ನೋಡಿದ ಮೇಲೆ.
ಹೌದು. ಸಾಮಾನ್ಯವಾಗಿ ಮದುವೆ ಸಡಗರವೆಂದರೆ, ವಾದ್ಯ ಮೇಳಗಳ ರಂಗು, ಮನಸೆಳೆಯುವ ಹೂವಿನ ಅಲಂಕಾರ, ಅತಿಥಿಗಳ ಕಲರವ ಹಾಗೂ ವಧು-ವರರ ಉತ್ಸಾಹದೊಂದಿಗೆ ಇಡೀ ಮದುವೆ ಮಂಟಪವೇ ದೇವಲೋಕದಂತೆ ಬದಲಾಗಿರುತ್ತದೆ. ಆದರೆ, ಕೇರಳದಲ್ಲಿ ನಡೆದ ಮದುವೆಯೊಂದು ಇದಕ್ಕೆ ತದ್ವಿರುದ್ಧವಾಗಿದೆ. ಏಕೆಂದರೆ ಸದಾ ನೋವು, ಆತಂಕ ಮತ್ತು ದುಃಖವೇ ಆವರಿಸಿರುವ ಆಸ್ಪತ್ರೆಯಲ್ಲಿ ನವಜೋಡಿಯ ಮದುವೆ ನಡೆದಿದೆ.
ತಿರುವನಂತಪುರದ ನಿವಾಸಿ ಮನೋಜ್ ಮತ್ತು ರೇವತಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಶನಿವಾರ (ಫೆ.6) ವಿಶೇಷ ವಿವಾಹ ಸಮಾರಂಭವನ್ನು ನೆರವೇರಿಸಿಕೊಂಡಿದ್ದಾರೆ. ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್, ಬೇಡ್ ಮೇಲೆಯೇ ರೇವತಿಯನ್ನು ವರಿಸಿದ್ದಾರೆ.
ಫೆ. 4ರಂದು ಮದುವೆ ನಡೆಯಬೇಕಿತ್ತು. ಆದರೆ, ಮನೋಜ್ ತುರ್ತು ಚಿಕಿತ್ಸೆಗೆ ಒಳಗಾಗಬೇಕಿತ್ತು. ಇದರಿಂದ ಎರಡು ಕುಟುಂಬದ ಅದ್ಧೂರಿ ವಿವಾಹದ ಕನಸಿಗೆ ನಿರಾಸೆಯಾಗಿತ್ತು. ಹೀಗಿದ್ದರೂ ನಿರಾಸೆಯನ್ನು ಬದಿಗೊತ್ತಿ ಆಸ್ಪತ್ರೆಯಲ್ಲಿ ಮದುವೆ ಮಾಡಲು ನಿರ್ಧರಿಸಿ, ಎರಡು ಕುಟುಂಬ ವಿಶೇಷತೆಯನ್ನು ಮೆರೆದಿದೆ.
ಎಸ್ಪಿ ಫೋರ್ಟ್ ಆಸ್ಪತ್ರೆಯ ಕೋಣೆಯೊಂದನ್ನು ಮದುವೆ ಮಂಟಪವಾಗಿ ಬದಲಾಯಿಸಿ ವಧು-ವರರ ಮದುವೆ ನೆರವೇರಿಸಲಾಗಿದೆ. ಮನೋಜ್ ಬೆಡ್ ಮೇಲೆಯೇ ಮಲಗಿ ರೇವತಿಗೆ ತಾಳಿಯನ್ನು ಕಟ್ಟಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಇಒ ಡಾ. ಪಿ. ಅಶೋಕನ್, ಡಾ. ಲೈಜಾ ಮತ್ತು ಇತರೆ ಸಿಬ್ಬಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು. (ಏಜೆನ್ಸೀಸ್)