

ಭಾರತದ ಅನ್ವೇಷಣೆಗಳು ಮತ್ತು ತಂತ್ರಜ್ಞಾನ ರಂಗದಲ್ಲಿನ ಇಂದುಗೊಳಿಸುವಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಮಾತ್ರವಲ್ಲ, ಹಲವು ರಂಗಗಳ ಪ್ರಗತಿಗೆ, ಸಬಲೀಕರಣಕ್ಕೆ ಹೊಸ ಪಥವನ್ನು ನಿರ್ವಿುಸುತ್ತಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆ ‘ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ’ (ಬಿಎಫ್ಎಸ್). ಉಷ್ಣ ವಲಯದಲ್ಲಿರುವ ಎಲ್ಲ ರಾಷ್ಟ್ರಗಳಿಗೂ ಅನುಕೂಲವಾಗುವಂತೆ ಜಗತ್ತಿನಲ್ಲೇ ಅತ್ಯಾಧುನಿಕ ಮತ್ತು ಹೆಚ್ಚು ನಿಖರ ಮಾಹಿತಿ ನೀಡುವ ಹವಾಮಾನ ಮುನ್ಸೂಚನಾ ವ್ಯವಸ್ಥೆಯಾದ ಬಿಎಫ್ಎಸ್ ಅನ್ನು ಭೂವಿಜ್ಞಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಹಲವು ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ. ಈ ನೂತನ ವ್ಯವಸ್ಥೆಯನ್ನು ಕೇಂದ್ರ ಭೂವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಭಾರತೀಯ ಹವಾಮಾನ ಇಲಾಖೆಗೆ ಮಂಗಳವಾರ ಹಸ್ತಾಂತರಿಸಿದ್ದಾರೆ.
ಭಾರತದ ಕೃಷಿ ವಲಯವನ್ನೂ ಒಳಗೊಂಡು ದೇಶದ ಆರ್ಥಿಕತೆಯ ಮೇಲೆ ಮುಂಗಾರು ಮತ್ತು ಹಿಂಗಾರು ಭಾರಿ ಪ್ರಭಾವ ಹೊಂದಿವೆ. ಮಳೆಯಾಶ್ರಿತ ಬೆಳೆಗಳು, ಜಲಾಶಯ, ಕುಡಿಯುವ ನೀರು ಮತ್ತು ಜಲವಿದ್ಯುತ್ ಕ್ಷೇತ್ರವು ಹೆಚ್ಚಾಗಿ ಮುಂಗಾರನ್ನೇ ಅವಲಂಬಿಸಿವೆ. ದೇಶದ 42ರಷ್ಟು ಜನಸಂಖ್ಯೆ ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗೂ ದೇಶದ ಜಿಡಿಪಿಯ ಶೇಕಡ 18.2ರಷ್ಟು ಗಾತ್ರವನ್ನು ಕೃಷಿ ವಲಯ ಹೊಂದಿದೆ. ಹೀಗಾಗಿ, ಹವಾಮಾನದ ನಿಖರ ಮಾಹಿತಿ ದೊರೆತರೆ ಅದರಿಂದ ದೇಶದ ಹಲವು ವಲಯಗಳಿಗೆ ಅನುಕೂಲ. ಮಳೆಯ ಪ್ರಮಾಣ, ಎಷ್ಟು ದಿನಗಳ ಕಾಲ ಸುರಿಯಲಿದೆ, ವಾಡಿಕೆಗಿಂತ ಅಧಿಕ ಅಥವಾ ಕಡಿಮೆ ಮಳೆ, ಗಾಳಿಯ ವೇಗದ ಮಾಹಿತಿಯ ಜತೆಗೆ ಚಂಡಮಾರುತ, ಅಕಾಲಿಕ ಮಳೆ, ಬಿರುಗಾಳಿಯ ಪೂರ್ವ ಸೂಚನೆಗಳು ದೊರೆತರೆ ಹಾನಿಯ ಪ್ರಮಾಣವನ್ನು ತಗ್ಗಿಸಲು ಸಾಧ್ಯ ಮತ್ತು ಇಂಥ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸ್ಥಳೀಯಾಡಳಿತ ಮತ್ತು ಸರ್ಕಾರ ಸರ್ವರೀತಿಯಿಂದಲೂ ಸನ್ನದ್ಧವಾಗಲು ಪೂರಕವಾಗುತ್ತದೆ.
ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ ಅಧ್ಯಯನ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಬಿಎಫ್ಎಸ್ ವೈಶಿಷ್ಟ್ಯವೆಂದರೆ, ಇದು ಗ್ರಾಮ ಮಟ್ಟದವರೆಗೆ ಮಾಹಿತಿ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಶೇಕಡ 67ರಷ್ಟು ನಿಖರತೆ ಹೊಂದಿದೆ. 2022ರಲ್ಲೇ ಅಭಿವೃದ್ಧಿಗೊಂಡಿದ್ದ ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ ಈವರೆಗೂ ಪರೀಕ್ಷಾ ಹಂತದಲ್ಲಿತ್ತು. ಇದರಿಂದ ಲಭ್ಯವಾಗುವ ಹವಾಮಾನ ಮಾಹಿತಿಯು ಮುಂಗಾರು, ಚಂಡಮಾರುತ, ಅಧಿಕ ಮಳೆ, ದಿಢೀರ್ ಮಳೆ (2 ಗಂಟೆ ಅವಧಿಯಲ್ಲಿ) ಸೇರಿದಂತೆ ಹವಾಮಾನ ಬದಲಾವಣೆಗೆ ತಕ್ಕಂತೆ ನಿಖರ ಮಾಹಿತಿ ನೀಡುವುದನ್ನು ಶೇಕಡ 3ರಿಂದ 67ಕ್ಕೆ ಹೆಚ್ಚಿಸಲಾಗಿರುವುದು ವಿಶೇಷ. ಈ ಮಾಹಿತಿಯನ್ನು ವಿಶ್ಲೇಷಿಸಿ ಹವಾಮಾನ ಇಲಾಖೆಯು ರೈತರಿಗೆ ಮಾಹಿತಿ ನೀಡಲಿದೆ.
ಈ ಮೊದಲು 4ರಿಂದ 5 ಪಂಚಾಯ್ತಿಗಳನ್ನು ಒಗ್ಗೂಡಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತಿತ್ತು. ಈ ನೂತನ ವ್ಯವಸ್ಥೆಯಿಂದ 1 ಅಥವಾ 2 ಪಂಚಾಯ್ತಿ ವ್ಯಾಪ್ತಿಯಲ್ಲಿನ ಹವಾಮಾನ ಬದಲಾವಣೆ ಮಾಹಿತಿ ನೀಡಲು ಸಾಧ್ಯವಾಗಲಿದೆ. ಈ ನಿಖರತೆಗಾಗಿ ಜಗತ್ತಿನ ಹಲವು ಹವಾಮಾನ ಮುನ್ಸೂಚನಾ ಸಂಸ್ಥೆಗಳು ನಿರಂತರ ಸಂಶೋಧನೆ ನಡೆಸುತ್ತಿವೆ. ಆದರೆ, 6 ಕಿ.ಮೀ. ವ್ಯಾಪ್ತಿಯೊಳಗಿನ ನಿಖರ ಮಳೆ ಮಾಹಿತಿ ನೀಡುವಲ್ಲಿ ಬಿಎಫ್ಎಸ್ ಮುಂಚೂಣಿಯಲ್ಲಿರುವುದು, ಮಹತ್ವದ ಮೈಲಿಗಲ್ಲು. ಈ ಸುಧಾರಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದು, ರೈತರ ನೆರವಿಗೆ ಬರಲಿ.