

ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿ ದಟ್ಟವಾದ ಮಂಜಿನಿಂದಾಗಿ ಬುಧವಾರ ರಾಷ್ಟ್ರೀಯ ಹೆದ್ದಾರಿ&19ರಲ್ಲಿ ಸುಮಾರು 12 ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ.
ಅಪಘಾತದಲ್ಲಿ ಸಿಲುಕಿದ ವಾಹನಗಳಲ್ಲಿ ಕೋಳಿಗಳನ್ನು ತುಂಬಿದ ಟ್ರಕ್ ಕೂಡ ಇತ್ತು. ಜನರು ಕೋಳಿಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದರು. ಕೋಳಿ ಪಡೆಯಲು ಜನರ ನಡುವೆ ಪೈಪೋಟಿ ಕೂಡ ಏರ್ಪಟಿತ್ತು. ಗಾಯಗೊಂಡಿದ್ದ ಟ್ರಕ್ ಚಾಲಕ ಸಹಾಯಕ್ಕಾಗಿ ಕೂಗುತ್ತಿದ್ದರೂ, ಜನರು ತಮ್ಮ ವಾಹನ ನಿಲ್ಲಿಸಿ ಕೋಳಿ ತೆಗೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಲಕ ಆರಂಭದಲ್ಲಿ ಕೋಳಿಯನ್ನು ಲೂಟಿ ಮಾಡದಂತೆ ತಡೆಯಲು ಪ್ರಯತ್ನಿಸಿದ. ಆದರೆ ಹೆಚ್ಚುತ್ತಿರುವ ಜನರ ಗುಂಪಿನ ಎದುರು ಆತ ಅಸಹಾಯಕನಾದ. ವಾಹನದಲ್ಲಿ 2,50,000 ರೂಪಾಯಿ ಮೌಲ್ಯದ ಕೋಳಿಗಳಿದ್ದು, ಇದರಿಂದ ಭಾರೀ ಆರ್ಥಿಕ ನಷ್ಟವಾಗಿದೆ ಎಂದು ಸುನೀಲ್ ತಿಳಿಸಿದ್ದಾರೆ. ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕ್ರೇನ್ಗಳನ್ನು ಕರೆಸಿ ಹಾನಿಗೊಳಗಾದ ವಾಹನಗಳನ್ನು ತೆಗೆದು ರಸ್ತೆ ತೆರವುಗೊಳಿಸಲಾಗಿದೆ ವರದಿಯಾಗಿದೆ.