

ಬಂಟ್ವಾಳ: ಜಕ್ರಿಬೆಟ್ಟು ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ ಶುಕ್ರವಾರ ಸ್ಕೂಟರ್‌ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಂಡಾರಿಬೆಟ್ಟು ನಿವಾಸಿ ಡೊಂಬಯ್ಯ ಮೂಲ್ಯ (65) ಎಂಬುವರು ಮೃತಪಟ್ಟ ವ್ಯಕ್ತಿ. ಅವರು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಜಕ್ರಿಬೆಟ್ಟು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ಸಂದರ್ಭ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಸರ್ಕಾರಿ ಬಸ್ ಹಿಂಬದಿಯಿಂದ ಸ್ಕೂಟರ್‌ಗೆ ಬಡಿದಿದೆ. ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಚಿಮ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡೊಂಬಯ್ಯ ತಮ್ಮ ಸಂಬಂಧಿಕರ ಮನೆಯಲ್ಲಿ ಸಂಕ್ರಮಣದ ದಿನದಂದು ದೈವದ ಕೆಲಸಕ್ಕೆ ಹೂವು ತರಲೆಂದು ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಡೊಂಬಯ್ಯ ಅವರು ಬಿ.ಸಿ.ರೋಡ್‌ನಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ಅನೇಕ ವರ್ಷಗಳಿಂದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಾಲಕನ ಅಜಾಗಕರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.