ಸಿಎಂ ಭೇಟಿ ಬಂದೋಬಸ್ತ್‌ ಟೆಂಪೋ ಡಿಕ್ಕಿ ಕರ್ತವ್ಯ ನಿರತ ಪೊಲೀಸ್‌ಗೆ ಗಂಭೀರ ಗಾಯ

accident-15
Published on

ಮಂಗಳೂರು: ಉಳ್ಳಾಲದ ಸೋಮೇಶ್ವರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭ ರಾಷ್ಟ್ರೀಯ ಹೆದ್ದಾರಿ-66ರ ಅಡಂಕುದ್ರು ಬಳಿ ಟೆಂಪೋ ಡಿಕ್ಕಿಯಾಗಿ ಬಂದೋಬಸ್ತ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.


ಕಂಕನಾಡಿ ನಗರ ಠಾಣಾ ಹೆಡ್‌ಕಾನ್‌ಸ್ಟೇಬಲ್ ಮಂಜುನಾಥ್ ಹೆಗ್ಡೆ ಎಂಬವರೇ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಬುಧವಾರದಿಂದ ದ.ಕ.ಜಿಲ್ಲೆಯಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಗುರುವಾರ ಮಧ್ಯಾಹ್ನ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಡಂಕುದ್ರುವಿನಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮಂಜುನಾಥ ಹೆಗ್ಡೆ ಅವರಿಗೆ ಟೆಂಪೋ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹೆಗ್ಡೆಯವರ ತಲೆ ರಸ್ತೆಯ ಡಿವೈಡರ್‌ಗೆ ಬಡಿದಿತ್ತು. ಗಂಭೀರ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net