

ಚಿಕ್ಕಮಗಳೂರು: ಆಸ್ಪತ್ರೆಗಳಿಂದ ರೋಗಿಗಳನ್ನು ಕರೆದೊಯ್ಯಲು ಸಮೀಪ ಖಾಸಗಿ ಆಂಬುಲೆನ್ಸ್‌ಗಳು ಇರುತ್ತವೆ. ಆದರೆ ತಾಲೂಕಿನ ಲಕ್ಯಾ ಕ್ರಾಸ್‌ನಲ್ಲಿ ಆಂಬುಲೆನ್ಸ್‌ಗಳನ್ನು ನಿಲ್ಲಿಸಿಕೊಂಡಿರುತ್ತಾರೆ! ಅಂದರೆ ಅಲ್ಲಿ ಆಸ್ಪತ್ರೆ ಇರದಿದ್ದರೂ ಅಪಘಾತವಾಗುವುದು ನಿಶ್ಚಿತ.
ಚಿಕ್ಕಮಗಳೂರು-ಕಡೂರು ಹೆದ್ದಾರಿಯ ಲಕ್ಯಾ ಕ್ರಾಸ್ ಸಮೀಪದ ತಿರುವಿನಲ್ಲಿ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ. ಕಡೂರು-ಮಂಗಳೂರು 173 ರಾಷ್ಟ್ರೀಯ ಹೆದ್ದಾರಿಯನ್ನು ಕೋಟ್ಯಂತರ ರೂಪಾಯಿವ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಲಕ್ಯಾ ಗ್ರಾಮದ ಬಳಿ ಒಂದು ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡದೆ ಇರುವುದು ಅವಾಂತರಗಳಿಗೆ ಕಾರಣವಾಗಿದೆ.
ಲಕ್ಯಾ ಕ್ರಾಸ್ ಸಮೀಪ ತಿರುವಿನಲ್ಲಿ ಹೆದ್ದಾರಿ ನಿರ್ಮಾಣ ಅಪೂರ್ಣವಾಗಿದೆ. ರಸ್ತೆ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ತಿರುವಿನಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗಿದೆ. ಮನೆಗಳು, ಅಂಗಡಿ ಮಳಿಗೆಗಳು ಇರುವ ಕಡೆ ಚರಂಡಿ ಕೆಲಸ ಪೂರ್ಣಗೊಳಿಸಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆಯ ನೀರು ಮನೆಗೆ ನುಗ್ಗುತ್ತದೆ.
ಕಾಮಗಾರಿ ಗುಣಮಟ್ಟ ಇಂಜಿನಿಯರ್‌ಗಳು ಪರಿಶೀಲನೆ ನಡೆಸಬೇಕು. ಆದರೆ ಸ್ಥಳಕ್ಕೆ ಭೇಟಿ ನೀಡದೆ ವರದಿ ನೀಡುತ್ತಿರುವುದರಿಂದ ಅನಾಹುತಗಳಿಗೆ ಕಾರಣವಾಗುತ್ತಿದೆ. ತಿರುವಿನಲ್ಲಿ ರಸ್ತೆ ನಿರ್ಮಾಣ ಸಂಪೂರ್ಣವಾಗಿ ಮುಗಿದಿಲ್ಲ. ಕಿರು ಸೇತುವೆ ಸಹ ಇದ್ದು, 400 ಮೀಟರ್ ಉದ್ದದಷ್ಟು ರಸ್ತೆಯನ್ನು ಅಗೆದು ಹಾಗೇ ಬಿಡಲಾಗಿದೆ. ಮಳೆಗಾಲದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ತಿರುವಿನಲ್ಲಿ ವಾಹನ ಸವಾರರು ಅತಿ ವೇಗದಿಂದ ಬಂದು ಪಲ್ಟಿ ಹೊಡೆಯುವುದು, ವಾಹನಗಳು ಡಿಕ್ಕಿ ಹೊಡೆದುಕೊಳ್ಳುವುದು, ನಿಯಂತ್ರಣ ತಪ್ಪಿ ಬಿದ್ದು ಅಪಘಾತವಾಗಿ ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಈ ಜಾಗದಲ್ಲಿ ವಾರದಲ್ಲಿ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಮೂರರಿಂದ ನಾಲ್ಕು ಮಂದಿ ಸಾವು ಅಥವಾ ಗಾಯಗೊಳ್ಳುವುದು ಖಾಯಂ. ಅಪಘಾತಗಳು ನಿಶ್ಚಿತವಾಗಿರುವುದರಿಂದ ಸ್ಥಳೀಯರ ಮನವಿ ಮೇರೆಗೆ ಅಲ್ಲಿ ಆಂಬುಲೆನ್ಸ್ ನಿಲ್ಲಿಸಿಕೊಂಡಿರುತ್ತಾರೆ. ರಸ್ತೆ ಬದಿ ಖಾಸಗಿ ಆಂಬುಲೆನ್ಸ್‌ಗಳು ಕಾಯುತ್ತಿರುವುದು ಆಘಾತಕಾರಿ ಸಂಗತಿ. ಅಲ್ಲಿ ಅಪಘಾತಗಳು ಎಷ್ಟರ ಮಟ್ಟಿಗೆ ಸಂಭವಿಸುತ್ತವೆ ಎಂಬುದು ಎಲ್ಲರೂ ಊಹಿಸಬಹುದು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ನಿರ್ಲಕ್ಷೃ ತೋರಿಸುತ್ತಿದೆ.
ಸೂಚನಾ ಫಲಕ ಇಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳಿಗೆ ಸಾಗುವ ತಿರುವುಗಳಲ್ಲಿ ವೇಗ ನಿಯಂತ್ರಣ ಉಬ್ಬುಗಳನ್ನು ಅಳವಡಿಸಿಲ್ಲ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಲ್ಲ. ನಿರಂತರವಾಗಿ ವಾಹನ ಅಪಘಾತಗಳು ಸಂಭವಿಸುತ್ತಿದ್ದರೂ ಪೊಲೀಸ್, ಪಿಡಬ್ಲುೃಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಂಚಾರಿ ಸೂಚನ ಫಲಕಗಳನ್ನು ಅಳವಡಿಸಿಲ್ಲ. ಅಪಘಾತಗಳು ನಿರಂತರವಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಲಕ್ಯಾ ಕ್ರಾಸ್ ಸಮೀಪದ ತಿರುವಿನಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರವಾಣಿ ಕರೆಗಳು ಬರುತ್ತಿದ್ದವು. ಸರ್ಕಾರಿ ಆಂಬುಲೆನ್ಸ್ ಬರುವಷ್ಟರಲ್ಲಿ ಗಾಯಾಳುಗಳು ಪ್ರಾಣ ಕಳೆದುಕೊಳ್ಳುತ್ತಾರೆ. ಪ್ರಾಣ ಹಾನಿ ಹೆಚ್ಚಾಗುತ್ತಿದ್ದವು. ಇದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಆಂಬುಲೆನ್ಸ್ ನಿಲ್ಲಿಸಲಾಗಿರುತ್ತದೆ ಎಂದು ಆಂಬುಲೆನ್ಸ್ ಚಾಲಕ ರಿಶಾನ್ ಮಾಹಿತಿ ನೀಡಿದರು.
ಲಕ್ಯಾ ಕ್ರಾಸ್ ಸಮೀಪದ ತಿರುವಿನಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಆ ಜಾಗದಲ್ಲಿ ಭೂ ಸ್ವಾಧೀನ ಆಗಬೇಕಾಗಿರುವುದರಿಂದ ರಸ್ತೆ ಕಾಮಗಾರಿ ಬಾಕಿ ಉಳಿಸಿಕೊಂಡಿದ್ದಾರೆ. ಅಪಘಾತಗಳ ಸಂಭವಿಸುತ್ತಿದ್ದರೂ ಯಾವುದೇ ರೀತಿ ಕ್ರಮಕೈಗೊಳ್ಳದೆ ಇದ್ದರೆ ಏನರ್ಥ? ಸಾರ್ವಜನಿಕರ ಹಿತದೃಷ್ಟಿಯಿಂದ ಭೂಮಿ ಸ್ವಾಧೀನಪಡಿಸಿಕೊಂಡು ಕೆಲಸ ಪೂರ್ಣಗೊಳಿಸಬೇಕು ಎಂಬುದು ಎಎಸ್ಪಿ ಕೃಷ್ಣಮೂರ್ತಿ ಅವರ ಒತ್ತಾಯ.