ಕಸ್ತೂರಿ ರಂಗನ್ ವರದಿಗೆ ಸಮ್ಮತಿ?: ಕೇರಳ ಮಾದರಿ ಅನುಸರಿಸಲು ಸಚಿವ ಸಂಪುಟ ಉಪ ಸಮಿತಿ ಚರ್ಚೆ

kastri
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕೇರಳ ಮಾದರಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಕೇಂದ್ರ ಸರ್ಕಾರಕ್ಕೆ ತನ್ನ ನಿಲುವು ವ್ಯಕ್ತಪಡಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆ ನಿರ್ಣಯಿಸಿದೆ. ಜೀವ, ಜೀವನೋಪಾಯ, ಪಶ್ಚಿಮಘಟ್ಟ ಉಳಿಕೆ

ಮೂರನ್ನೂ ಗಂಭೀರ ವಾಗಿ ಪರಿಗಣಿಸಬೇಕಿದೆ. ಇದಕ್ಕಿರುವ ಏಕೈಕ ಮಾರ್ಗ ಎಂದರೆ ಕೇರಳ ಮಾದರಿ ಅನುಸರಣೆ. ಈ ಕುರಿತು ಮುಖ್ಯಮಂತ್ರಿ ಹಾಗೂ 10 ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಸಮಾಲೋಚಿಸಿ ಸಂಪುಟಕ್ಕೆ ಅಭಿಪ್ರಾಯ ಮಂಡಿಸಲು ತೀರ್ವನಿಸಲಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲಿ 1533 ವಸತಿ ಪ್ರದೇಶಗಳಿದ್ದು, ಇಲ್ಲಿರುವ ಜನರ ಬದುಕಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ನಿರ್ದಿಷ್ಟ ಷರತ್ತುಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರಕ್ಕೆ ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ನಿಲುವು ತಿಳಿಸುವ ಕುರಿತು ರ್ಚಚಿಸಲಾಯಿತು. ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಮಂಕಾಳ ವೈದ್ಯ ಭಾಗಿಯಾಗಿದ್ದರು.

ರಾಜ್ಯದ ನಿಲುವೇನು?: ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದ ಪಶ್ಚಿಮ ಘಟ್ಟದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೊಷಿಸುವಂತೆ ಸೂಚಿಸಿದೆ. ಆದರೆ ಈಗಾಗಲೇ ರಾಜ್ಯ ಸರ್ಕಾರ ವನ್ಯಜೀವಿಧಾಮ, ಅಭಯಾರಣ್ಯ, ಹುಲಿ ಸಂರಕ್ಷಿತ ಮೀಸಲು ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ 16,632 ಚದರ ಕಿ.ಮೀ.ಪ್ರದೇಶ ಘೊಷಿತ ಅರಣ್ಯ, ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝುಡ್) ಎಂದು ಘೊಷಿಸಿದೆ. ಈ ಎಲ್ಲ ಪ್ರದೇಶಗಳು ಸಂರಕ್ಷಿತವಾಗಿರುತ್ತದೆ. ಹೀಗಾಗಿ ಇದಕ್ಕಷ್ಟೇ ಸೀಮಿತಗೊಳಿಸಿ ಡಾ. ಕಸ್ತೂರಿ ರಂಗನ್ ಸಮಿತಿ ಶಿಫಾರಸಿನಂತೆ ಕೇಂದ್ರ ಸರ್ಕಾರ ಹೊರಡಿಸಿರುವ 6ನೇ ಅಧಿಸೂಚನೆಗೆ ಸರ್ಕಾರದ ನಿಲುವು ವ್ಯಕ್ತಪಡಿಸಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಬಹುದೆಂಬ ಅಭಿಪ್ರಾಯವನ್ನು ಖಂಡ್ರೆ ವ್ಯಕ್ತಪಡಿಸಿದರು.

ಸಾಧಕ-ಬಾಧಕ ಚರ್ಚೆ: ಪರಿಸರ ಸೂಕ್ಷ್ಮ ಪ್ರದೇಶದ ಕುರಿತಂತೆ ಕೇಂದ್ರದ ಅಧಿಸೂಚನೆ ಒಪ್ಪಿಕೊಂಡರೆ ಪಶ್ಚಿಮಘಟ್ಟದ ಜನರ ಬದುಕಿನ ಮೇಲೆ ಆಗಬಹುದಾದ ಪರಿಣಾಮ, ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಅಭಿಪ್ರಾಯ ಸಂಗ್ರಹ: ಅಂತಿಮವಾಗಿ ಸಿಎಂ ಜತೆ ರ್ಚಚಿಸಿದ ನಂತರ ಪಶ್ಚಿಮಘಟ್ಟದ 10 ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಚಿವ ಸಂಪುಟಕ್ಕೆ ಅಂತಿಮ ಶಿಫಾರಸು ಸಲ್ಲಿಸಲು ಸಭೆ ನಿರ್ಣಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net