

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳಿಗೆ ಸೇರಿದ ರಾಜ್ಯದ 14 ಕಡೆಗಳಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಬುಧವಾರ ಈ ನಾಲ್ವರು ಅಧಿಕಾರಿಗಳ ಕಚೇರಿ-ನಿವಾಸ ಸೇರಿ ರಾಜ್ಯದ 14 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿತ ದಾಖಲೆ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಶೋಧ ಮುಂದುವರಿದಿದ್ದು, ನಾಲ್ವರೂ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ದಾಳಿಯ ವಿವರ: ಎಲ್. ಸತೀಶ್ ಕುಮಾರ್, ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು: ಮೈಸೂರು ನಗರದ ಟಿ.ಕೆ.ಲೇಔಟ್ನಲ್ಲಿನ ನಿವಾಸ, ಬೆಂಗಳೂರು ಡಾಲರ್ಸ್ ಕಾಲನಿಯ ವಾಸದ ಬಾಡಿಗೆ ಮನೆ, ಗಾಂಧಿನಗರದ ವಾಣಿಜ್ಯ ತೆರಿಗೆ ಕಚೇರಿ ಮೇಲೆ ದಾಳಿ ನಡೆದಿದೆ.
ಎನ್.ರಾಮಕೃಷ್ಣ, ವಲಯ ಅರಣ್ಯಾಧಿಕಾರಿ, ಶ್ರೀನಿವಾಸಪುರ ವಲಯ, ಕೋಲಾರ: ಕೋಲಾರದ ಬಂಗಾರಪೇಟೆಯ ವಿಜಯನಗರದಲ್ಲಿನ ನಿವಾಸ, ಮಿಟ್ಟಹಳ್ಳಿಯ ಸ್ವಗ್ರಾಮದ ಮನೆ, ಬೆಂಗಳೂರಿನ ಕಸ್ತೂರಿನಗರದಲ್ಲಿನ ಸ್ನೇಹಿತರ ಮನೆ, ಇವರು ಕರ್ತವ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಆಸ್ತಿ ದಾಖಲೆ, ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಗೋಪಶೆಟ್ಟಿ ಮಲ್ಲಿಕಾರ್ಜುನ, ಕಾರ್ಯನಿರ್ವಾಹಕ ಅಭಿಯಂತರ, ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ ವಿಭಾಗ: ರಾಯಚೂರು ಜಿಲ್ಲೆಯ ಐಡಿಎಸ್ಎಂಟಿ ಲೇಔಟ್, ಮಂತ್ರಾಲಯ ರಸ್ತೆಯಲ್ಲಿನ ವಾಸದ ಮನೆ, ಲಿಂಗಸಗೂರು ರಸ್ತೆಯಲ್ಲಿ ಪತ್ನಿ ಹೆಸರಿನಲ್ಲಿರುವ ಪೆಟ್ರೋಲ್ ಬಂಕ್, ಹೆದ್ದಾರಿಯಲ್ಲಿರುವ ನಾಗಭೂಷಣ್ ಟ್ರಾ್ಯಕ್ಟರ್ ಷೋ ರೂಂ, ಇವರು ಕೆಲಸ ಮಾಡುತ್ತಿರುವ ಕಚೇರಿ ಮೇಲೆ ದಾಳಿ, ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ರಾಘಪ್ಪ ಲಾಲಪ್ಪ ಲಮಾಣಿ, ಸಹಾಯಕ ಅಭಿಯಂತರ, ಕೃ.ಭಾ.ಜ.ನಿ.ನಿ., ಬಾಗಲಕೋಟೆ ಕ್ಯಾಂಪ್ ಆಲಮಟ್ಟಿ, ಬೀಳಗಿ: ಬಾಗಲಕೋಟೆ ವಿದ್ಯಾಗಿರಿಯಲ್ಲಿನ ವಾಸದ ಮನೆ, ಇವರ ಸಹೋದರನ ಮಾಲೀಕತ್ವದ ಶಿರಗುಪ್ಪಿ ಎಲ್.ಟಿ. ಗ್ರಾಮದಲ್ಲಿರುವ ವಾಸದ ಮನೆ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರ ಕಚೇರಿಗೆ ದಾಳಿ ನಡೆಸಿ ಆಸ್ತಿಗೆ ಸಂಬಂಧಿತ ದಾಖಲೆ ವಶಕ್ಕೆ ಪಡೆಯಲಾಗಿದೆ.
ದಾಳಿ ಮುಂದುವರಿದಿದ್ದು, ಜಪ್ತಿ ಮಾಡಿದ ದಾಖಲೆ ಪರಿಶೀಲಿಸಿದ ಬಳಿಕ ಎಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ-ಪಾಸ್ತಿ ಹೊಂದಿದ್ದಾರೆ ಎಂಬುದು ಬೆಳಕಿಗೆ ಬರಲಿದೆ. ನೋಟಿಸ್ ಜಾರಿಗೊಳಿಸಿ ನಾಲ್ವರನ್ನೂ ವಿಚಾರಣೆ ನಡೆಸಲಾಗುವುದು. | ಟಿ.ಸುನೀಲ್ ಕುಮಾರ್ ಎಡಿಜಿಪಿ, ಎಸಿಬಿ