ಪಾರ್ಕಿಂಗ್​ ಜಾಗಕ್ಕಾಗಿ ಜಗಳ; ಮನೆ ಎದುರು ಮೂತ್ರ ವಿಸರ್ಜನೆ; ಬಳಸಿದ ಮಾಸ್ಕ್ ಎಸೆದರಾ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ?

ABVP president
Published on

ಚೆನ್ನೈ: ಮನೆಯ ಬಾಗಿಲ ಎದುರು ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಬಳಸಿದ ಮಾಸ್ಕ್​ಗಳನ್ನು ಎಸೆದಿದ್ದಾಗಿ 62 ರ್ವದ ಹಿರಿಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸಿಸಿ ಕ್ಯಾಮರಾದ ದೃಶ್ಯಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ.

ಈ ಆರೋಪವೀಗ ಭಾರಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಏಕೆಂದರೆ ಈ ಆರೋಪ ಕೇಳಿ ಬಂದಿರುವುದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ಅಧ್ಯಕ್ಷರಾಗಿರುವ ಡಾ.ಸುಬ್ಬಯ್ಯ ಷಣ್ಮುಗಂ ವಿರುದ್ಧ.

ಇಷ್ಟೇ ಅಲ್ಲ, ಡಾ.ಸುಬ್ಬಯ್ಯ ಷಣ್ಮುಗಂ ಕಿಲಿಪಾಕ್​ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ಯಾನ್ಸರ್​ ಚಿಕಿತ್ಸಾ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಪಾರ್ಕಿಂಗ್​ ಜಾಗಕ್ಕಾಗಿ ಉಂಟಾದ ವಿವಾದ ಅತಿರೇಕಕ್ಕೆ ಹೋಗಿದೆ.

ಅಡಂಬಾಕ್ಕಂ ಠಾಣೆ ವ್ಯಾಪ್ತಿಯಲ್ಲಿರುವ ಹೌಸಿಂಗ್​ ಸೊಸೈಟಿಯಲ್ಲಿರುವ ಸುಬ್ಬಯ್ಯ, ನೆರೆಮನೆಯ ಮಹಿಳೆಗೆ ಸೇರಿದ ಪಾರ್ಕಿಂಗ್​ ಜಾಗವನ್ನು ಬಳಸಿಕೊಳ್ಳಲು ಅನುಮತಿ ಕೇಳಿದ್ದಾರೆ. ತಿಂಗಳಿಗೆ 1,500 ರೂ. ಬಾಡಿಗೆ ನೀಡಿ ಬಳಸಿಕೊಳ್ಳಿ ಎಂದು ಆ ಮಹಿಳೆ ಹೇಳಿದ್ದಾಳೆ. ದುಡ್ಡು ಕೇಳಿದ್ದಕ್ಕೆ ಸಿಟ್ಟಾದ ಸುಬ್ಬಯ್ಯ ಹೀಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಇದೆಂಥ ಹಿನ್ನಡೆ?

ಸ್ಟ್ಯಾಂಡ್​ ಅಪ್​ ಕಾಮಿಡಿಯನ್​ ವಿಜಯ್​ ರಾಘವನ್​ ತನ್ನ ಸಂಬಂಧಿಗಾದ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಇದು ಭಾರಿ ವೈರಲ್​ ಆಗಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಬಲಪಂಥೀಯರ ವಿರುದ್ಧ ದೂರು ಕೇಳಿ ಬಂದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲಿ ಎಂದು ಡಿಎಂಕೆ ನಾಯಕಿ ಕನಿಮೋಳಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್​ನ ವಿದ್ಯಾರ್ಥಿ ಸಂಘಟನೆಯಾದ ಎನ್​ಎಸ್​ಯುಐ ಸುಬ್ಬಯ್ಯ ವಿರುದ್ಧದ ಆರೋಪವನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಎಬಿವಿಪಿ ಟೀಕಿಸಿದೆ. ಸದ್ಯ ಪೊಲಿಸರು ಎಫ್​ಐಆರ್​ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net