

ನವದೆಹಲಿ: ನ್ಯಾಯಾಲಯದಲ್ಲಿ ಅಸಂಬದ್ಧ ಭಾಷಣ ಮಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ವಿರುದ್ಧ ದಹಲಿ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಕ ಸಲ್ಮಾನ್ ವಾರದ ಸಂಭಾವನೆ ಎಷ್ಟು?
ಸಂಜಯ್ ಸಿಂಗ್ ವಿಚಾರಣೆ ವೇಳೆ, ಪ್ರಮುಖ ಕೈಗಾರಿಕೋದ್ಯಮಿ ಅದಾನಿ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ನೀವು ಅದಾನಿ ಮತ್ತು ಮೋದಿ (ಪ್ರಧಾನಿ) ಬಗ್ಗೆ ಮಾತನಾಡಲು ಬಯಸಿದರೆ, ಇನ್ನು ಮುಂದೆ ನೀವು ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಕರಣದ ಸಂಬಂಧ ಅದಾನಿ ವಿರುದ್ಧದ ದೂರನ್ನು ತನಿಖಾ ಸಂಸ್ಥೆ ನಿರ್ಲಕ್ಷಿಸುತ್ತಿದೆ ಎಂದು ಸಂಜಯ್ ಸಿಂಗ್ ಆರೋಪಿಸಿದ್ದರು. ಸರ್ಕಾರಿ ಅಭಿಯೋಜಕರು ವಿಚಾರಣೆ ಸಂದರ್ಭ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ನಿಮ್ಮ ತಾಯಿಯಿಂದ ಹಣ ಏಕೆ ತೆಗೆದುಕೊಂಡರಿ? ನಿಮ್ಮ ಪತ್ನಿಯ ಖಾತೆಗೆ 10ಸಾವಿರ ರೂ. ಏಕೆ ಕಳುಹಿಸಲಾಗಿದೆ ಎಂದು ಸಂಸ್ಥೆ ಪ್ರಶ್ನಿಸುತ್ತಿದೆ. ಇಡಿ ಎಂಟರ್ ಟೈನ್ ಮೆಂಟ್ ವಿಭಾಗವಾಗಿ ಮಾರ್ಪಟ್ಟಿದೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ಅದಾನಿ ವಿರುದ್ಧ ದೂರು ದಾಖಲಿಸಿದ್ದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಸಂಜಯ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ಎರಡು ವಾರಗಳವರೆಗೆ ವಿಸ್ತರಿಸಲು ಇಡಿ ಕೇಳಿಕೊಂಡಿದ್ದರಿಂದ ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ಆ.27 ರವರೆಗೆ ವಿಸ್ತರಿಸಿದೆ. ಉದ್ಯಮಿ ದಿನೇಶ್ ಅರೋರಾ ಮತ್ತು ಅಂದಿನ ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ನಡುವೆ ಸಂಜಯ್ ಸಿಂಗ್ ಸಭೆ ಏರ್ಪಡಿಸಿದ್ದರು ಎಂದು ಇಡಿ ಆರೋಪಿಸಿದೆ. ಇಡಿ ಮತ್ತು ಸಿಬಿಐ ಈಗಾಗಲೇ ದಿನೇಶ್ ಅರೋರಾ ಮತ್ತು ಸಿಸೋಡಿಯಾ ಅವರನ್ನು ಬಂಧಿಸಿದೆ. ಏತನ್ಮಧ್ಯೆ, ಸಂಜಯ್ ಸಿಂಗ್ ವಿರುದ್ಧ 3 ಚಾರ್ಜ್ ಶೀಟ್ ಸಲ್ಲಿಸಿರುವ ಇಡಿ, ಈ ಪ್ರಕರಣದಲ್ಲಿ ಸಂಜಯ್ ಸಿಂಗ್ ಹೆಸರನ್ನು ಸೇರಿಸಿಲ್ಲ, ಅವರ ಹೇಳಿಕೆ ದಾಖಲಿಸಲು ಸಮನ್ಸ್ ಕಳುಹಿಸಿಲ್ಲ.