ಇನ್ನೂ ಮೂರು ತಿಂಗಳಿರಲಿ ಶೇ. 50 ವಿನಾಯಿತಿ​; ಆಪ್​ನಿಂದ ಮುಖ್ಯಮಂತ್ರಿಗೆ ಮನವಿ

Traffic Police
Published on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಗೆ ನೀಡಿರುವ ಶೇ.50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಎಂಬುದಾಗಿ ಆಮ್‌ ಆದ್ಮಿ ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದೆ.

ಆಪ್​ನ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಅವರು ಸಿಎಂ ಬೊಮ್ಮಾಯಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆ. 11ರೊಳಗೆ ಪಾವತಿಸಿದಲ್ಲಿ ಶೇ. 50 ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ವಿನಾಯಿತಿ ನೀಡುವ ಮೂಲಕ ವಾಹನಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲ ಕೇವಲ ಶ್ರೀಮಂತ ವಾಹನಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಕೇವಲ ಒಂದು ವಾರಗಳ ಸಮಯಾವಕಾಶ ನೀಡುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಾಹನ ಸವಾರರಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ. ಅಲ್ಲದೇ, ಅನೇಕ ವಾಹನ ಸವಾರರು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ಸೇರಿ ನಾನಾ ರೀತಿಯ ಅಗತ್ಯ ಖರ್ಚುಗಳು ಈ ಸಮಯದಲ್ಲಿರುತ್ತದೆ. ವಿನಾಯಿತಿಯ ಯೋಜನೆಯನ್ನು ದಿಢೀರ್‌ ಘೋಷಿಸಿರುವುದರಿಂದ ಮೊದಲೇ ಹಣವನ್ನು ಕೂಡಿಟ್ಟುಕೊಳ್ಳಲೂ ವಾಹನ ಸವಾರರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಈ ವಿನಾಯಿತಿ ಯೋಜನೆಯ ಕಾಲಮಿತಿ ಮೂರು ತಿಂಗಳ ತನಕ ವಿಸ್ತರಿಸಬೇಕು. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರಿಗೂ ವಿನಾಯಿತಿಯ ಫಲಾನುಭವ ಸಿಗುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net