ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

ATM
Published on

ಬೆಂಗಳೂರು: ಅಪರಿಚಿತ ವ್ಯಕ್ತಿಗಳು ಎಟಿಎಮ್​ನಿಂದ ಲಕ್ಷಾಂತರ ರೂಪಾಯಿ ಮೇಲಿಂದ ಮೇಲೆ ಡ್ರಾ ಮಾಡಿದ್ದು, ಯಾವ ಖಾತೆಯಿಂದ ಹಣ ಕಡಿತವಾಗಿದೆ ಎಂಬುದನ್ನು ಪತ್ತೆ ಮಾಡಲಾಗದಿರುವುದು ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.

ಲೆಕ್ಕಕ್ಕೆ ಸಿಗದಂತೆ ಕೆನರಾ ಬ್ಯಾಂಕ್ ಎಟಿಎಮ್​​ನಿಂದ ಕಳವಾಗಿದ್ದು 1.7 ಲಕ್ಷ ರೂ. ಡ್ರಾ ಆಗಿದೆ. ಈ ಕುರಿತು ಎಂ.ಜಿ.ರಸ್ತೆ ಕೆನರಾ ಬ್ಯಾಂಕ್ ವೃತ್ತ ಕಚೇರಿ ಅಧಿಕಾರಿ ಬಾಬು ಮಹೇಶ್‌ ಕುಮಾರ್ ಎಂಬುವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲಿಸಿ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಲಸೂರಿನಲ್ಲಿ ಇರುವ ಕೆನರಾ ಬ್ಯಾಂಕ್ ಎಟಿಎಮ್​ನಲ್ಲಿ ಅಪರಿಚಿತರು ಐದು ಬಾರಿ ಒಟ್ಟಾರೆ 50 ಸಾವಿರ ರೂ., ಬಿಲ್ಲಕೋಟೆ ಎಟಿಎಮ್​ನಲ್ಲಿ 50 ಸಾವಿರ ರೂ., ಕುಲುವನಹಳ್ಳಿ ಎಟಿಎಮ್​​ನಲ್ಲಿ 70 ಸಾವಿರ ರೂ. ಒಟ್ಟಾರೆ 1.7 ಲಕ್ಷ ರೂ. ಬೇರೆ ಬೇರೆ ದಿನಾಂಕದಂದು ಡ್ರಾ ಮಾಡಿಕೊಂಡಿದ್ದಾರೆ.

ಆದರೆ, ಯಾರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ ಎಂಬುದು ಮಾತ್ರ ನೋಂದಣಿ ಆಗಿಲ್ಲ. ಬದಲಿಗೆ ಎಟಿಎಮ್​ನಲ್ಲಿ ಹಣ ಡ್ರಾ ಆಗಿದೆ. ಇದು ಇತ್ತೀಚೆಗೆ ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಟಿಎಮ್​ ಬೂತ್ ಸೆಕ್ಯುರಿಟಿ ಏಜೆನ್ಸಿ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಪರಿಚಿತ ವ್ಯಕ್ತಿ ಹಣ ಡ್ರಾ ಮಾಡಿರುವುದು ಖಚಿತವಾಗಿದೆ.

ಇದೇ ರೀತಿ ಹಲವು ಬ್ಯಾಂಕ್ ಎಟಿಎಮ್​ನಲ್ಲಿ ನಡೆದಿದೆ. ಇಲ್ಲಿಯವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net