

ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆ ಕಾವು ಏರುತ್ತಿದ್ದು ಬಿಜೆಪಿ-ಆಮ್ ಆದ್ಮಿ ಪಕ್ಷದ ನಡುವಿನ ಕಾದಾಟವೂ ಹೆಚ್ಚಾಗಿದೆ. ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಸಿಎಂ ಅಧಿಕೃತ ನಿವಾಸ ‘ಶೀಶ್ ಮಹಲ್’ ನವೀಕರಣಕ್ಕೆ ಸಾರ್ವಜನಿಕ ಹಣವನ್ನು ವಿಪರೀತವಾಗಿ ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿರುವ ಮಧ್ಯೆ ಆಪ್ ನಾಯಕರು ಸಿಎಂ ಅಧಿಕೃತ ಬಂಗಲೆ ಬಳಿ ತೆರಳಿ ಬುಧವಾರ ಹೈಡ್ರಾಮಾವೇ ನಡೆಯಿತು. ಇದಕ್ಕೆ ಪ್ರತಿಯಾಗಿ ಆಪ್ ನಾಯಕರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೋದಾಗ ಪೊಲೀಸರು ತಡೆದರು.
ಬಿಜೆಪಿಯ ‘ಶೀಶ್ ಮಹಲ್’ ಆರೋಪಕ್ಕೆ ಪ್ರತಿಯಾಗಿ ಸತ್ಯದರ್ಶನ ಮಾಡಿಸಬೇಕು ಎಂದು ಆಪ್ ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರಧ್ವಾಜ್ ಮಾಧ್ಯಮ ದವರೊಂದಿಗೆ ಸಿಎಂ ಬಂಗಲೆಗೆ ಭೇಟಿ ನೀಡಿದಾಗ ಕಾನೂನು ಮತ್ತು ಸುವ್ಯವಸ್ಥೆ ಉಲ್ಲೇಖಿಸಿ ಪೊಲೀಸರು ಅವರನ್ನು ತಡೆದರು.
ನಮ್ಮನ್ನೇಕೆ ಒಳಗೆ ಬಿಡುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗೆ ಪ್ರಶ್ನಿಸಿ, ‘ನಮ್ಮನ್ನು ತಡೆಯುವುದು ಸಂಸದ ಮತ್ತು ಸಂಪುಟ ಸಚಿವರ ವಿಶೇಷಾಧಿಕಾರಕ್ಕೆ ಚ್ಯುತಿ ತಂದಂತೆ’ ಎಂದು ಕಿಡಿಕಾರಿದರು. ‘ಇಲ್ಲಿ ಚಿನ್ನದ ಟಾಯ್ಲೆಟ್, ಈಜುಕೊಳ, ಮಿನಿಬಾರ್ ಇದೆ ಎಂದು ಬಿಜೆಪಿ ತಪ್ಪು ಮಾಹಿತಿ ಹರಡುತ್ತಿದೆ. ಆದ್ದರಿಂದ ನಮಗೆ ವಾಸ್ತವ ತೋರಿಸಿ ಮತ್ತು ಮಾಧ್ಯಮದವರನ್ನೂ ಬಿಡಿ’ ಎಂದು ಸಂಸದ ಸಿಂಗ್ ಆಗ್ರಹಿಸಿದರು. ಪೊಲೀಸರನ್ನು ಪ್ರಶ್ನಿಸಿದ ಸಚಿವ ಭಾರಧ್ವಜ್, ‘ನನಗಿಂತ ಮೇಲಿರುವ ವ್ಯಕ್ತಿ ಲೆಫ್ಟಿನೆಂಟ್ ಗವರ್ನರ್ ಮಾತ್ರ. ನಮ್ಮನ್ನು ತಡೆಯಿರಿ ಎಂದು ನಿಮಗೆ ನಿರ್ದೇಶನ ನೀಡಿದ್ದು ಯಾರು’ ಎಂದು ಪ್ರಶ್ನಿಸಿದರು.
‘ಬಿಜೆಪಿಯ ಸುಳ್ಳು ಬಯಲಾಗಿದೆ. ಮುಖ್ಯಮಂತ್ರಿಯ ನಿವಾಸದಲ್ಲಿ ಚಿನ್ನದ ಶೌಚಾಲಯ, ಈಜುಕೊಳ, ಮಿನಿಬಾರ್ ಇದೆ ಎಂದು ಬಿಜೆಪಿಯವರು ತಿಂಗಳುಗಳಿಂದ ಹೇಳುತ್ತಾ ಬಂದಿದ್ದಾರೆ. ಕೇವಲ ಇಬ್ಬರನ್ನು ತಡೆಯಲು ಅವರು ಜಲ ಫಿರಂಗಿಗಳನ್ನು ಹಾಕಿದ್ದಾರೆ. ನಮ್ಮನ್ನು ಏಕೆ ತಡೆಯುತ್ತಿದ್ದಾರೆ? ಬಿಜೆಪಿಯವರು ಸತ್ಯ ಹೇಳುತ್ತಿದ್ದರೆ, ಮುಖ್ಯಮಂತ್ರಿಗಳ ನಿವಾಸವನ್ನು ತೆರೆದು ನಮಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಬೇಕು’ ಎಂದು ಸವಾಲು ಹಾಕಿದರು.
ಇದಾದ ಬಳಿಕ ಆಮ್ ಆದ್ಮಿ ಪಕ್ಷದ ವಿವಿಧ ನಾಯಕರು ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಯಾವ ರೀತಿ ನವೀಕರಣ ಆಗಿದೆ ಎಂಬುದನ್ನು ಬಿಂಬಿಸಲು ನಿವಾಸದ ಒಳಕ್ಕೆ ತೆರಳಲು ಯತ್ನಿಸಿದಾಗ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಪೊಲೀಸ್ ವಾಹನದಲ್ಲಿ ಎಲ್ಲರನ್ನೂ ಕರೆದೊಯ್ಯಲಾಯಿತು. ಆಪ್ಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ದೆಹಲಿ ಜನರು ಅರವಿಂದ ಕೇಜ್ರಿವಾಲ್ಗೆ ಮೂಲಭೂತ ಪ್ರಶ್ನೆಯನ್ನಷ್ಟೇ ಕೇಳುತ್ತಿದ್ದಾರೆ. ಕೇಜ್ರಿವಾಲ್ 2 ಬೆಡ್ ರೂಮ್ ಅಪಾರ್ಟ್ವೆುಂಟ್ನಲ್ಲಿ ವಾಸಿಸುವುದಾಗಿ ಭರವಸೆ ನೀಡಿ ರಾಜಕೀಯಕ್ಕೆ ಬಂದರು. ವಿವಿಐಪಿ ಭದ್ರತೆ ತೆಗೆದುಕೊಳ್ಳುವುದಿಲ್ಲ, ಅದು ದೆಹಲಿಯ ಜನರಿಗೆ ತಮ್ಮ ಬದ್ಧತೆ ಎಂದಿದ್ದರು. ಆದರೆ ವಾಸ್ತವ ಏನು? ಕರೊನಾ ಸಮಯದಲ್ಲಿ ಎಲ್ಲರೂ ಬಳಲುತ್ತಿದ್ದಾಗ ಕೇಜ್ರಿವಾಲ್ 52 ಕೋಟಿ ರೂ. ಖರ್ಚು ಮಾಡಿದ್ದರು’ ಎಂದು ಕಿಡಿಕಾರಿದ್ದಾರೆ.
ಆಪ್ಗೆ ಇಂಡಿಯಾ ಬೆಂಬಲ: ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳು ಬೆಂಬಲ ಸೂಚಿಸಿದ್ದು, ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದೆ. ಬಂಗಾಳದ ತೃಣಮೂಲ ಕಾಂಗ್ರೆಸ್, ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಉತ್ತರಪ್ರದೇಶದ ಸಮಾಜವಾದಿ ಪಕ್ಷ ದಿಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೊಷಿಸಿವೆ. ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಅಪಸ್ವರಗಳು ಕೇಳಿಬರುತ್ತಿರುವ ನಡುವೆ ಪ್ರಾದೇಶಿಕ ಪಕ್ಷಗಳ ಈ ನಡೆ ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಆಪ್ ಕೂಡ, ಕಾಂಗ್ರೆಸ್ಅನ್ನು ಇಂಡಿಯಾ ಮೈತ್ರಿಕೂಟದಿಂದ ಹೊರಗಿಡಬೇಕೆಂದು ಆಗ್ರಹಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಶೀಶ್ವುಹಲ್ vs ರಾಜ್ವುಹಲ್: ಮಾಜಿ ಸಿಎಂ ಕೇಜ್ರಿವಾಲ್ 52 ಕೋಟಿ ರೂ. ಖರ್ಚು ಮಾಡಿ ‘ಶೀಶ್ ಮಹಲ್’ ಕಟ್ಟಿಸಿದ್ದಾರೆ. ಇದು ಕೇವಲ ಅರಮನೆ ಮಾತ್ರವಲ್ಲ ಐಷಾರಾಮಿ ಸೌಲಭ್ಯಗಳನ್ನೂ ಹೊಂದಿದೆ. 5 ಕೋಟಿ ರೂ.ಮೌಲ್ಯದ ರಿಮೋಟ್ ಕಂಟ್ರೋಲ್ ಪರದೆಗಳು, 1 ಕೋಟಿ ರೂಪಾಯಿಯ ರೇಲಿಂಗ್, 70 ಲಕ್ಷದ ಸ್ವಯಂಚಾಲಿತ ಬಾಗಿಲು, 65 ಲಕ್ಷದ ಟಿವಿ, 30 ಲಕ್ಷದ ರಿಮೋಟ್ ಕಂಟ್ರೋಲ್ ಲೈಟ್ಸ್, 9 ಲಕ್ಷದ ಫ್ರಿಡ್ಜ್, 4 ಲಕ್ಷದ ಮಸಾಜ್ ಚೇರ್ ಮಹಲ್ನಲ್ಲಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಶೀಶ್ವುಹಲ್ ಆರೋಪಕ್ಕೆ ಆಪ್ ರಾಜಮಹಲ್ ವಿಷಯವನ್ನು ಪ್ರಸ್ತಾಪಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ 2,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣವಾಗಿರುವ ರಾಜಮಹಲ್ನಲ್ಲಿ ವಾಸಿಸುತ್ತಿದ್ದಾರೆ. ಪ್ರಧಾನಿ ನಿವಾಸದೊಳಗೆ ಮಾಧ್ಯಮದವರು ತೆರಳಲು ಅವಕಾಶ ಮಾಡಿಕೊಡುತ್ತಾರಾ ಎಂದು ಆಪ್ ನಾಯಕ ಸಂಜಯ್ ಸಿಂಗ್ ತಿರುಗೇಟು ನೀಡಿದ್ದಾರೆ.