

ಚೆನ್ನೈ: ಮಿಚೌಂಗ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡು ಅಕ್ಷರಶಃ ನಲುಗಿ ಹೋಗಿದೆ. ಅದರಲ್ಲೂ ಸಮುದ್ರ ತೀರದಲ್ಲಿರುವ ರಾಜಧಾನಿ ಚೆನ್ನೈ ತೀವ್ರ ಸಂಕಷ್ಟ ಎದುರಿಸುತ್ತಿದೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿವೆ. ಮನೆಗಳಿಗೂ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಚೆನ್ನೈನಲ್ಲಿ ಪ್ರವಾಹ ಸ್ಥಿತಿ ತಲೆದೂರಿದ್ದು, ಕೆಲವರು ನೀರಿನ ನಡುವೆ ಸಿಲುಕಿ, ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ 12 ಮಂದಿ ಅಸು ನೀಗಿದ್ದಾರೆ.
ತಾಜಾ ಸುದ್ದಿ ಏನೆಂದರೆ, ಬಾಲಿವುಡ್ ನಟ ಆಮೀರ್ ಖಾನ್ಗೆ ಚೆನ್ನೈ ಪ್ರವಾಹದ ಬಿಸಿ ತಟ್ಟಿದೆ. ಭಾರಿ ಮಳೆಯ ನಡುವೆ ನೀರಿನ ಪೂರೈಕೆ, ವಿದ್ಯುತ್ ಹಾಗೂ ಮೊಬೈಲ್ ಸಿಗ್ನಲ್ಗಳಿಲ್ಲದೆ ಆಮೀರ್ ಪರದಾಡಬೇಕಾಯಿತು. ಕರ್ಪಕ್ಕಂ ಏರಿಯಾದಲ್ಲಿ ಸಿಲುಕಿದ್ದ ಆಮೀರ್ ಅವರನ್ನು ಸುಮಾರು 24 ಗಂಟೆಗಳ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ರಕ್ಷಣೆ ಮಾಡಿವೆ.
ಕಾಲಿವುಡ್ ನಟ ವಿಷ್ಣು ವಿಶಾಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಸ್ವತಃ ವಿಶಾಲ್ ಅವರೇ ರಕ್ಷಣೆ ಕೋರಿದ್ದರು. ಮಾಹಿತಿಗಳ ಪ್ರಕಾರ ಆಮೀರ್ ಖಾನ್ ಅವರು ಕರ್ಪಕ್ಕಮ್ ಏರಿಯಾದಲ್ಲಿರುವ ವಿಶಾಲ್ ಮನೆಯಲ್ಲೇ ತಂಗಿದ್ದರು. ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ವಿಶಾಲ್, ಪತ್ನಿ ಜ್ವಾಲ ಗುಟ್ಟಾ ಹಾಗೂ ಆಮೀರ್ ಖಾನ್ ಇರುವುದನ್ನು ನೋಡಬಹುದು. ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಅವರನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡುತ್ತಿರುವುದನ್ನು ಕಾಣಬಹುದು.
ವಿಶಾಲ್ ಶೇರ್ ಮಾಡಿಕೊಂಡಿರುವ ಇನ್ನು ಕೆಲವು ಫೋಟೋಗಳಲ್ಲಿ ಕರ್ಪಕ್ಕಮ್ನ ಅವರ ನಿವಾಸದ ಸುತ್ತಮುತ್ತಲಿನ ಏರಿಯಾ ನೀರಿನಿಂದ ಆವೃತವಾಗಿರುವುದನ್ನು ನೋಡಬಹುದು. ಅಲ್ಲದೆ, ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಯಾವುದೇ ವಿದ್ಯುತ್, ವೈಫೈ, ಫೋನ್ ಸಿಗ್ನಲ್ಗಳಿಲ್ಲ. ಟೆರೆಸ್ ಮೇಲೆ ಒಂದೇ ಒಂದು ಕೇಂದ್ರದಲ್ಲಿ ಸಿಗ್ನಲ್ ಸಿಗುತ್ತದೆ. ಅದನ್ನು ಬಿಟ್ಟು ಬೇರೇನು ಇಲ್ಲ. ರಕ್ಷಣೆ ಕೋರಿದ್ದೇವೆ ಎಂದು ಬರೆದುಕೊಂಡಿದ್ದರು.
ಇನ್ನು ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಯೊಂದಿಗೆ ಇರಲು ಆಮೀರ್ ಖಾನ್ ಕೆಲವು ತಿಂಗಳ ಹಿಂದೆ ಚೆನ್ನೈಗೆ ಸ್ಥಳಾಂತರಗೊಂಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ಆಮೀರ್ ಖಾನ್ ಶೀಘ್ರದಲ್ಲೇ ಸಿತಾರೆ ಜಮೀನ್ ಪರ್ ಎಂಬ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್)