More

    ಆಂಧ್ರದಲ್ಲಿ ಮಿಚೌಂಗ್​ ಅಬ್ಬರ ತಿರುಪತಿಗೆ ತೆರಳೋ ಮುನ್ನ ಎಚ್ಚರ! 51 ವಿಮಾನ, 100 ರೈಲು ಸೇವೆ ರದ್ದು

    ವಿಶಾಖಪಟ್ಟಣ: ತಮಿಳುನಾಡಿನಲ್ಲಿ ಅಬ್ಬರಿಸಿ ಬೊಬ್ಬಿರಿದ ಮಿಚೌಂಗ್​ ಚಂಡಮಾರುತ ಇದೀಗ ಕೊಂಚ ತಣ್ಣಗಾಗಿದ್ದು, ಆಂಧ್ರ ಪ್ರದೇಶದ ಮೇಲೆ ತನ್ನ ರೌದ್ರಾವಾತರವನ್ನು ಮುಂದುವರಿಸಿದೆ. ತಮಿಳುನಾಡಿನಿಂದ ಆಂಧ್ರಕ್ಕೆ ಎಂಟ್ರಿ ಕೊಟ್ಟಿರುವ ಮಿಚೌಂಗ್, ಭಾರಿ ಮಳೆಯೊಂದಿಗೆ​ ಭೂಕುಸಿತಗಳನ್ನು ಉಂಟು ಮಾಡುತ್ತಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ, ಉಭಯ ರಾಜ್ಯಗಳ ನಡುವೆ ಸಾಕಷ್ಟು ವಿಮಾನ ಮತ್ತು ರೈಲು ಸೇವೆಗಳು ರದ್ದಾಗಿವೆ. ಆಂಧ್ರದ ಒಳಗೂ ಸಂಚಾರದಲ್ಲಿ ವ್ಯತ್ಯಯವಾಗಿದೆ.

    ವೈಜಾಗ್, ತಿರುಪತಿ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳು ಭಾರಿ ಚಂಡಮಾರುತ ಪರಿಣಾಮ ಸೇವೆಯನ್ನು ಅಮಾನತಿನಲ್ಲಿ ಇಟ್ಟಿವೆ. ಅಲ್ಲದೆ, ರೈಲು ಸೇವೆಗಳಲ್ಲೂ ವ್ಯತ್ಯಯವಾಗಿದೆ. ಒಟ್ಟು 51 ವಿಮಾನಗಳ ಸೇವೆ ಆಂಧ್ರದ ಪ್ರಮುಖ 3 ನಿಲ್ದಾಣಗಳಲ್ಲಿ ರದ್ದಾಗಿದ್ದರೆ, ಸುಮಾರು 100ಕ್ಕೂ ಅಧಿಕ ರೈಲುಗಳ ಸಂಚಾರವೂ ಕೂಡ ರದ್ದಾಗಿದೆ.

    ಚಂಡಮಾರುತದ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶಾಖಪಟ್ಟಣಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳವಾರ 23 ವಿಮಾನ ಸೇವೆಗಳನ್ನು ರದ್ದುಗೊಳಿಸಿದರೆ, ತಿರುಪತಿ ಕೂಡ ಎಲ್ಲ 15 ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಹೈದರಾಬಾದ್-ವಿಜಯವಾಡ-ಬೆಂಗಳೂರು ಏರ್ ಇಂಡಿಯಾ ವಿಮಾನ ಹೊರತುಪಡಿಸಿ, ವಿಜಯವಾಡದಲ್ಲಿ ಎಲ್ಲ 13 ವಿಮಾನಗಳು ತಮ್ಮ ಸೇವೆಯನ್ನು ರದ್ದು ಮಾಡಿವೆ.

    ಇನ್ನೂ ಸಾಮಾನ್ಯ ದಿನಗಳಲ್ಲಿ ಹೈದರಾಬಾದ್‌ನಿಂದ ತಿರುಪತಿಗೆ ಆರು ವಿಮಾನಗಳು, ಬೆಂಗಳೂರು, ವಿಜಯವಾಡ, ವೈಜಾಗ್, ಗುಲ್ಬರ್ಗಾ ಮತ್ತು ಬೆಳಗಾವಿಯಿಂದ ತಲಾ ಒಂದು ವಿಮಾನವು ತಿರುಪತಿಗೆ ಪ್ರತಿದಿನ ಸಂಚರಿಸುತ್ತಿದ್ದವು. ಆದರೆ, ಸೈಕ್ಲೋನ್​ ಪರಿಣಾಮ ಇಂದು (ಡಿ.05) ಎಲ್ಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೈದರಾಬಾದ್ ಮತ್ತು ಬೆಂಗಳೂರಿಗೆ ತಲಾ ನಾಲ್ಕು ವಿಮಾನಗಳು, ಚೆನ್ನೈಗೆ ಮೂರು ವಿಮಾನಗಳು, ದೆಹಲಿ ಮತ್ತು ಕೋಲ್ಕತ್ತಾಗೆ ತಲಾ ಎರಡು ಮತ್ತು ಪುಣೆ ಮತ್ತು ಕಡಪಾಗೆ ತಲಾ ಒಂದು ವಿಮಾನ ಸೇರಿದಂತೆ ಸುಮಾರು 23 ವಿಮಾನ ಸೇವೆಗಳನ್ನು ವೈಜಾಗ್ ವಿಮಾನ ನಿಲ್ದಾಣದಿಂದ ರದ್ದುಗೊಳಿಸಲಾಗಿದೆ.

    ಚಂಡಮಾರುತದ ಪರಿಣಾಮ ಆಂಧ್ರದ ಒಂಬತ್ತು ಕರಾವಳಿ ಜಿಲ್ಲೆಗಳ ಮೇಲೆ ತೀವ್ರ ಪ್ರಭಾವ ಬೀರಿರುವುದರಿಂದ ಎಲ್ಲ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಪ್ಯಾಸೆಂಜರ್​ ರೈಲುಗಳನ್ನು ವಿಶಾಖಪಟ್ಟಣಂನಿಂದ ವಿಜಯವಾಡಕ್ಕೆ ಮತ್ತು ವಿಜಯವಾಡದಿಂದ ಚೆನ್ನೈ ಮಾರ್ಗದಲ್ಲಿ ಓಡಿಸುವುದನ್ನು ರದ್ದುಗೊಳಿಸಲಾಗಿದೆ.

    ಮಿಚೌಂಗ್ ಆಂಧ್ರದಲ್ಲಿ ಇಂದು ಮಧ್ಯಾಹ್ನದಿಂದ ತನ್ನ ಅಬ್ಬರ ಆರಂಭಿಸಿದ್ದು, ಭೂಕುಸಿತ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಸುಮಾರು 9,450 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ನೆಲ್ಲೂರು, ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳಲ್ಲಿ ಈಗಾಗಲೇ ಭಾರಿ ಗಾಳಿಯೊಂದಿಗೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಆಂಧ್ರ ಸರ್ಕಾರವು ಚಂಡಮಾರುತ ಪೀಡಿತ ಜಿಲ್ಲೆಗಳಿಗೆ ಹಲವಾರು ಹಿರಿಯ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

    ಬಾಲಕ ಬಲಿ
    ಭಾರಿ ಮಳೆಗೆ ತಿರುಪತಿಯಲ್ಲಿ 4 ವರ್ಷದ ಬಾಲಕ ಬಲಿಯಾಗಿದ್ದಾನೆ. ಮೃತ ಬಾಲಕನನ್ನು ತಿರುಪತಿ ಜಿಲ್ಲೆಯ ಯೆರ್ಪೆಸು ಮಂಡಲದ ಚಿಂದೇಪಲ್ಲಿ ಎಸ್‌ಟಿ ಕಾಲೋನಿಯ ನಿವಾಸಿ ಯಶವಂತ್ ಎಂದು ಗುರುತಿಸಲಾಗಿದೆ. ಮಿಚೌಂಗ್ ಚಂಡಮಾರುತದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ.

    ಮಿಚೌಂಗ್​ ಅಬ್ಬರ ಹಿನ್ನೆಲೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸೈಕ್ಲೋನ್ ಪರಿಹಾರ ಕ್ರಮಗಳ ವರ್ಚುವಲ್ ಸಭೆ ನಡೆಸಿದ್ದಾರೆ. ಶೀಘ್ರ ವಿದ್ಯುತ್ ಮರುಸ್ಥಾಪನೆ ಹಾಗೂ ಸಕಾಲದಲ್ಲಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಕ್ಷಣದ ಕ್ರಮಕ್ಕಾಗಿ ಸರ್ಕಾರ 22 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​)

    ಆಂಧ್ರಕ್ಕೆ ಅಪ್ಪಳಿಸಲಿದೆ ಮೈಚಾಂಗ್ ಸೈಕ್ಲೋನ್, 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್; 200ಕ್ಕೂ ಹೆಚ್ಚು ರೈಲುಗಳು, 70 ವಿಮಾನಗಳ ಹಾರಾಟ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts