More

  ಇನ್ಸ್​ಪೆಕ್ಟರ್​ ಮಾಡಿದ ಅವಮಾನದಿಂದ ಕಾನ್ಸ್​ಟೆಬಲ್​ ಹುದ್ದೆ ತೊರೆದ ಉದಯ್ ಇಂದು ಯುಪಿಎಸ್​ಸಿ ಸಾಧಕ!​

  ಹೈದರಾಬಾದ್​: ಇಚ್ಛಾಶಕ್ತಿಯೊಂದಿದ್ದರೆ ಮನುಷ್ಯನಿಗೆ ಸಾಧಿಸದೇ ಇರುವುದು ಯಾವುದೂ ಇಲ್ಲ. ಬಡತನ, ತಂದೆ-ತಾಯಿ ಇಲ್ಲದಿರುವುದು ಹಾಗೂ ಪ್ರೋತ್ಸಾಹ ಸಿಗದಿರುವುದು ಸೇರಿದಂತೆ ಕೆಲ ಕಾರಣಗಳಿಂದ ಕೆಲವರು ಗುರಿಯತ್ತ ಸಾಗದೇ ಹಿಂದೆ ಉಳಿದುಬಿಡುತ್ತಾರೆ. ಇನ್ನು ಕೆಲವರೂ ಎಲ್ಲಾ ಇದ್ದರೂ ಯಾವುದೇ ಗುರಿ ಇರುವುದಿಲ್ಲ. ಆದರೆ, ಕೆಲವರು ಮಾತ್ರ ಗುರಿ ಸಾಧಿಸುವ ಉದ್ದೇಶದೊಂದಿಗೆ ಕಠಿಣ ತಪಸ್ಸನ್ನು ಮಾಡುತ್ತಾರೆ. ಅಧ್ಯಯನದಲ್ಲಿ ತುಂಬಾ ಪರಿಶ್ರಮ ವಹಿಸಿ, ಅಂತಿಮವಾಗಿ ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಅಂಥವರ ಬಗ್ಗೆ ಇಡೀ ಜಗತ್ತು ಮಾತನಾಡುತ್ತದೆ. ಆ ಪಟ್ಟಿಗೆ ಸೇರಿದವರು ಉದಯ್​ ಕೃಷ್ಣಾ ರೆಡ್ಡಿ. ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಯುಪಿಎಸ್​ಸಿ ಪಾಸ್​ ಮಾಡಿದ್ದಾರೆ. ಇವರ ಯಶೋಗಾಥೆಯನ್ನು ನಾವೀಗ ತಿಳಿಯೋಣ.

  ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್‌ನಂತಹ ಸಿವಿಲ್ ಸರ್ವಿಸ್ ಉದ್ಯೋಗಗಳ ಮೇಲಿನ ಕ್ರೇಜ್ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ದೇಶಾದ್ಯಂತ ಅನೇಕ ಯುವಕರು ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಲೇ ಇರುತ್ತಾರೆ. ಯುಪಿಎಸ್​ಸಿ ಪಾಸ್​ ಮಾಡಿದರೆ ಕೀರ್ತಿಯ ಜತೆಗೆ ದೇಶಕ್ಕೆ ಸೇವೆ ಕೂಡ ಸಲ್ಲಿಸಬಹುದು ಎಂದು ಭಾವಿಸುತ್ತಾರೆ. ಅನೇಕರು ಮೊದಲ ಪ್ರಯತ್ನದಲ್ಲಿ ವಿಫಲರಾದರೂ, ಎಂದೂ ಹಿಂಜರಿಯದೇ ವರ್ಷಗಟ್ಟಲೆ ತಯಾರಿ ನಡೆಸುತ್ತಾರೆ. ಪಾಸ್​ ಮಾಡಲೇಬೇಕೆಂಬ ದೃಢ ಸಂಕಲ್ಪದಿಂದ ತಯಾರಿ ನಡೆಸಿ ಯಶಸ್ಸನ್ನು ಸಾಧಿಸುತ್ತಾರೆ. ಅದೇ ರೀತಿ ಆಂಧ್ರ ಪ್ರದೇಶದ ಯುವಕನೊಬ್ಬ ಸಮರ್ಪಣಾ ಭಾವದಿಂದ ಓದಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

  ಪ್ರಕಾಶಂ ಜಿಲ್ಲೆಯ ಸಿಂಗರಾಯಕೊಂಡ ಮಂಡಲದ ಉದಯ್ ಕೃಷ್ಣಾರೆಡ್ಡಿ ಯುಪಿಎಸ್​ಸಿಯಲ್ಲಿ 780ನೇ ರ್ಯಾಂಕ್ ಪಡೆದಿದ್ದಾರೆ. ಆದರೆ ಈ ಯಶಸ್ಸು ಸಾಧಿಸಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಕೋಚಿಂಗ್ ತೆಗೆದುಕೊಂಡರೂ ಯಶಸ್ಸು ಕಾಣದ ಎಷ್ಟೋ ಯುವಕರನ್ನು ನೋಡಿದ್ದೇವೆ. ಆದರೆ ಕೃಷ್ಣಾ ರೆಡ್ಡಿಯವರ ಬಾಲ್ಯ ತುಂಬಾ ಕಷ್ಟಗಳಿಂದ ಕೂಡಿತ್ತು. ಚಿಕ್ಕವನಿರುವಾಗಲೇ ತಂದೆ-ತಾಯಿ ತೀರಿಕೊಂಡರು. ಅಜ್ಜಿಯ ಆಶ್ರಯದಲ್ಲೇ ಬೆಳೆದರು. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಪಿಯುಸಿ ಮತ್ತು ಡಿಗ್ರಿ ಮುಗಿಸಿದ್ದಾರೆ. ಅವರ ಅಜ್ಜಿ ತರಕಾರಿ ಮಾರಾಟ ಮಾಡಿ ಕೃಷ್ಣಾ ರೆಡ್ಡಿಗೆ ಶಿಕ್ಷಣ ನೀಡಿದರು.

  ಅಜ್ಜಿಯ ಕಷ್ಟ ನೋಡಿದ ಕೃಷ್ಣಾ ರೆಡ್ಡಿ ಒಳ್ಳೆಯ ಕೆಲಸ ಪಡೆಯುವ ಆಸೆ ಇಟ್ಟುಕೊಂಡಿದ್ದರು. ಅಜ್ಜಿಯ ತ್ಯಾಗ, ಕಷ್ಟಗಳನ್ನು ನೆನೆದು ಕಠಿಣ ಶ್ರಮವಹಿಸಿ ಅಧ್ಯಯನ ಮಾಡಿದ ಉದಯ ಕೃಷ್ಣಾ ರೆಡ್ಡಿ ಇಂದು ಯುಪಿಎಸ್​ಸಿಯಲ್ಲಿ 780ನೇ ರ್ಯಾಂಕ್ ಪಡೆದಿದ್ದಾರೆ. ಅದಕ್ಕೂ ಮೊದಲು ಕೃಷ್ಣಾರೆಡ್ಡಿ ಅವರಿಗೆ ಕಾನ್​ಸ್ಟೆಬಲ್​ ಕೆಲಸ ಸಿಕ್ಕಿತು. ಆದರೆ 2019ರಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ನಿಂದ ಅವಮಾನಕ್ಕೆ ಒಳಗಾದ ಕೃಷ್ಣಾರೆಡ್ಡಿ ಆ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್​ಸಿಯತ್ತ ಮುಖಮಾಡಿದರು. ಈ ಹಾದಿಯಲ್ಲಿ ಮೂರು ಬಾರಿ ಪ್ರಯತ್ನಿಸಿ ವಿಫಲರಾದರು. ಆದರೂ ತಮ್ಮ ಛಲವನ್ನು ಬಿಡಲಿಲ್ಲ. ಅಂತಿಮವಾಗಿ 4ನೇ ಪ್ರಯತ್ನದಲ್ಲಿ 780ನೇ ರ್ಯಾಂಕ್​ ಪಡೆಯುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

  ಪೊಲೀಸರ ಮುಂದೆ ಅವಮಾನ
  ಈ ಬಗ್ಗೆ ಮಾತನಾಡಿದ ಉದಯ ಕೃಷ್ಣಾ ರೆಡ್ಡಿ, ವೈಯಕ್ತಿಕ ದ್ವೇಷದ ಕಾರಣದಿಂದ ಸರ್ಕಲ್ ಇನ್ಸ್‌ಪೆಕ್ಟರ್ 60 ಪೊಲೀಸರ ಮುಂದೆ ನನ್ನನ್ನು ಅವಮಾನಿಸಿದರು. ಅದೇ ದಿನ ನಾನು ಕೆಲಸಕ್ಕೆ ರಾಜೀನಾಮೆ ನೀಡಿದೆ ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿ, ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. 780ನೇ ರ್ಯಾಂಕ್​ ಪಡೆದಿರುವ ಹಿನ್ನೆಲೆಯಲ್ಲಿ ಉದಯ್ ಕೃಷ್ಣಾ ರೆಡ್ಡಿ ಅವರನ್ನು ಭಾರತೀಯ ಕಂದಾಯ ಸೇವೆಗೆ ನಿಯೋಜಿಸಬಹುದು, ಆದರೆ, ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗುವವರೆಗೂ ತಯಾರಿ ಮುಂದುವರಿಸುವುದಾಗಿ ಉದಯ್​ ಹೇಳುತ್ತಾರೆ.

  ಹೀಗೆ ಹಲವಾರು ಕಷ್ಟಗಳನ್ನು ಎದುರಿಸಿ ಯುಪಿಎಸ್​ಸಿಯಲ್ಲಿ ರ್ಯಾಂಕ್ ಗಳಿಸಿ ಹಲವಾರು ಯುವಕರಿಗೆ ಉದಯ ಕೃಷ್ಣ ರೆಡ್ಡಿ ಮಾದರಿಯಾಗಿದ್ದಾರೆ. ಇವರ ಯಶೋಗಾಥೆಯ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

  ಎರಡನೇ ಮದ್ವೆ ಆಗಬಾರದಿತ್ತು! ಪಶ್ಚಾತಾಪದ ಮಾತುಗಳನ್ನಾಡಿ ಕಣ್ಣೀರಿಟ್ಟಿದ್ದರು ದ್ವಾರಕೀಶ್​

  ವಿರಾಟ್​​ ಕೊಹ್ಲಿ ಎಫೆಕ್ಟ್​! ಅವೇಶ್​ ಖಾನ್​ಗೆ ಹೆಲ್ಮೆಟ್​ ಕೊಡದೆ ಬ್ಯಾಟಿಂಗ್​ಗೆ ಇಳಿಸಿದ ಆರ್​ಆರ್​ ಮ್ಯಾನೇಜ್​ಮೆಂಟ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts