

ಎನ್.ಆರ್.ಪುರ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ರಾಜಕೀಯ ಪ್ರೇರಿತ ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ರಿತಿನ್ ಆರೋಪಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅರವಿಂದ ಕೇಜ್ರೀವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಇಡಿ ಅಧಿಕಾರಿಗಳು ಮನಿ ಲ್ಯಾಂಡ್ ಆ್ಯಕ್ಟ್ ಪ್ರಕಾರ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಬೇಲ್ ಸಿಗುವುದಿಲ್ಲ. ಶರತ್ ರೆಡ್ಡಿ ಕಂಪನಿಯಿಂದ 100 ಕೋಟಿ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ 10 ಸಾವಿರ ರೂ. ಮಾತ್ರ ಸಿಕ್ಕಿದೆ. ಇಡಿ ಅಧಿಕಾರಿಗಳು ತನಿಖೆ ಮಾಡಿ ಶರತ್ ಚಂದ್ರ ರೆಡ್ಡಿ ಅವರಿಗೆ ಜಾಮೀನು ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಎಸ್‌ಬಿಐ ಬ್ಯಾಂಕಿನ ಬಾಂಡ್‌ಗಳನ್ನು ತನಿಖೆ ಮಾಡಿದಾಗ ಶರತ್ ಚಂದ್ರ ರೆಡ್ಡಿ ಕಂಪನಿಯಿಂದ ಬಿಜೆಪಿಗೆ 50 ಕೋಟಿ ರೂ. ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಬಂಧಿಸಬೇಕಾಗಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ ಎಂದು ದೂರಿದರು.
ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಎಂ.ಕೆ.ಎಲ್ದೋಸ್ ಮಾತನಾಡಿ, ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಪ್ರಜಾಪ್ರಭುತ್ವ ನಾಶ ಮಾಡುತ್ತಿದೆ. ಇದನ್ನು ಖಂಡಿಸುತ್ತೇವೆ ಎಂದರು.
ಎಎಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ನಜೀರ್ ಅಹಮದ್, ಮುಖಂಡರಾದ, ವಸಂತಕುಮಾರ್, ಅನೀಶ್. ರಾಜೇಶ್, ಬಿನು, ಜಾರ್ಜ್ ಇದ್ದರು.