ನೀರಾವರಿ ಪಂಪ್​ಸೆಟ್​ಗೆ ಆಧಾರ್ ಜೋಡಣೆ ಇಂದೇ ಕೊನೆ

ವಿಜಯವಾಣಿ-5-3
Published on

ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಹಾಯಧನ ಸ್ಥಗಿತ | ಎಸ್ಕಾಂಗಳಿಗೆ ಇಂಧನ ಇಲಾಖೆ ಖಡಕ್ ಎಚ್ಚರಿಕೆ

ಬೆಂಗಳೂರು: ನೀರಾವರಿ ಪಂಪ್​ಸೆಟ್ (ಐ.ಪಿ.ಸೆಟ್)ಗಳಿಗೆ ಆಧಾರ್ ಸಂಖ್ಯೆ ಜೋಡಿಸಲು ಒಂದೆಡೆ ರೈತರು ಪ್ರತಿರೋಧವೊಡ್ಡಿದ್ದರೆ, ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಸ್ಕಾಂಗಳಿಗೆ ಇಂಧನ ಇಲಾಖೆ ಸೋಮವಾರ (ಸೆ.23)ವೇ ಕೊನೇ ಎಂದು ತಿಳಿಸಿದೆ. ಇಲಾಖೆ ನಿರ್ಧಾರದ ಪ್ರಕಾರ ಜುಲೈ ಅಂತ್ಯಕ್ಕೆ ಜೋಡಣೆ ಮುಗಿಸಬೇಕಾಗಿತ್ತು. ಆದರೆ ನೋಡಲ್ ಏಜೆನ್ಸಿಯಾದ ಬೆಸ್ಕಾಂ ತಾಂತ್ರಿಕ, ವಾಸ್ತವಿಕ ಸಮಸ್ಯೆಗಳನ್ನು ವಿವರಿಸಿ ಕಾಲಾವಕಾಶ ವಿಸ್ತರಣೆಗೆ ಕೋರಿತ್ತು. ನಂತರ ಇಂಧನ ಇಲಾಖೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಆರ್ಥಿಕ ಇಲಾಖೆ ಗಡುವು ವಿಸ್ತರಣೆಗೆ ಒಪ್ಪಿ, ಸೆಪ್ಟೆಂಬರ್​ನ ಸಹಾಯಧನ ಬಿಡುಗಡೆಗೆ ಸಹಮತಿಸಿದೆ. ಅದೇ ಕಾಲಕ್ಕೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ. ಎಲ್ಲ ಐ.ಪಿ.ಸೆಟ್​ಗಳಿಗೆ ಆಧಾರ್ ಜೋಡಿಸದಿದ್ದರೆ ಅಕ್ಟೋಬರ್ ಸಹಾಯಧನ ಬಿಡುಗಡೆಯಾಗದು ಎಂದೂ ತಿಳಿಸಿದೆ.

ಖಡಕ್ ಎಚ್ಚರಿಕೆ: ಐದು ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿರ್ದೇಶನದಂತೆ ಐ.ಪಿ.ಸೆಟ್​ಗೆ ಆಧಾರ್ ಲಿಂಕ್ ಮಾಡಲಾಗುತ್ತಿದೆ. ಸೆ.23ರೊಳಗೆ 10 ಎಚ್​ಪಿವರೆಗಿನ ಎಲ್ಲ ಐ.ಪಿ.ಸೆಟ್​ಗಳಿಗೆ ಆಧಾರ್ ಜೋಡಣೆ ಪೂರ್ಣಗೊಳಿಸಬೇಕು. ಜತೆಗೆ ಐ.ಪಿ.ಸೆಟ್ ಮಾಲೀಕತ್ವ, ಜಮೀನಿನ ವಿಸ್ತೀರ್ಣ ಮತ್ತಿತರ ಅಂಶಗಳ ವಿಶ್ಲೇಷಣಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ. ಅಕ್ಟೋಬರ್​ನ ಸಬ್ಸಿಡಿ ಸ್ಥಗಿತವಾದರೆ ಎಸ್ಕಾಂಗಳೇ ಜವಾಬ್ದಾರಿ ಎಂದೂ ತಿಳಿಸಿದೆ.

ಹಲವು ಅಡಚಣೆ: ರಾಜ್ಯದಲ್ಲಿ 34 ಲಕ್ಷ ನೀರಾವರಿ ಪಂಪ್​ಸೆಟ್​ಗಳಿರುವ ಅಂದಾಜಿದೆ. ಈ ಪೈಕಿ 32 ಲಕ್ಷ ಐ.ಪಿ.ಸೆಟ್​ಗಳಿಗೆ ಆಧಾರ್ ಜೋಡಣೆ (ಶೇ. 94.30)ಯಾಗಿದೆ ಎನ್ನುವುದು ಇಂಧನ ಇಲಾಖೆ ಅಧಿಕೃತ ಮಾಹಿತಿ. ವ್ಯವಸ್ಥಿತವಾಗಿ ನೀರಾವರಿ ಪಂಪ್​ಸೆಟ್​ಗಳ ಸಹಾಯಧನ ಪಡೆಯಲು, ನೈಜ ಮತ್ತು ಅರ್ಹ ರೈತರಿಗೆ ಪ್ರಯೋಜನ ಒದಗಿಸುವುದು ಆಧಾರ್ ಲಿಂಕ್ ಉದ್ದೇಶ ಎಂಬುದು ಸರ್ಕಾರದ ಸಮಜಾಯಿಷಿ. ಈ ನಡುವೆ ಇಂಧನ ಇಲಾಖೆಗೆ ಬೆಸ್ಕಾಂ ನೀಡಿರುವ ವಿವರಣೆ ಪ್ರಕಾರ ಭೂ ಮಾಲೀಕನ ನಿಧನ, ಭೂ ಮಾಲೀಕತ್ವ ಬದಲಾವಣೆ, ಕೌಟುಂಬಿಕ ಕಾರಣಗಳು, ಫ್ರೂಟ್ಸ್ ಮತ್ತು ಡೆಟಾ ಬೇಸ್​ನಲ್ಲಿ ಜೋಡಣೆಗೆ ಮೊಬೈಲ್ ಸಂಖ್ಯೆ ದಾಖಲಾಗದಿರುವುದು, ಅಮಾನ್ಯ ಆಧಾರ್ ಕಾರ್ಡ್ ಇತ್ಯಾದಿ ಅಡಚಣೆಗಳ ಪರಿಣಾಮ 1,17,775 ಐ.ಪಿ.ಸೆಟ್​ಗಳಿಗೆ ಜೋಡಣೆ ಸಾಧ್ಯವಾಗುತ್ತಿಲ್ಲ. ಅಮಾನ್ಯ ಆಧಾರ್ ಕಾರ್ಡ್ ಸಂಬಂಧಿಸಿದ ಮಾಲೀಕರಿಂದ ವಾಪಸ್ ಪಡೆಯುವುದು, ಕಂದಾಯ ಖಾತೆಗಳನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆ ಚಾಲ್ತಿಗೊಳಿಸುವುದು ಮುಂತಾದ ಆಡಳಿತಾತ್ಮಕ ಕ್ರಮ ಮುಂದಿಟ್ಟು ಬೆಸ್ಕಾಂ ಸೆಪ್ಟೆಂಬರ್​ವರೆಗೆ ಕಾಲಾವಕಾಶ ಪಡೆದಿದೆ.

ಒಬ್ಬ ರೈತನ ಒಂದು ನೀರಾವರಿ ಪಂಪ್​ಸೆಟ್​ಗೆ ಮಾತ್ರ ಸಬ್ಸಿಡಿ ಕೊಡುತ್ತೇವೆ. ಹೆಚ್ಚುವರಿ ಐ.ಪಿ.ಸೆಟ್​ಗಳಿಗೆ ಉಚಿತ ವಿದ್ಯುತ್ ನಿರಾಕರಿಸುವುದು ಆಧಾರ್ ಜೋಡಣೆ ಉದ್ದೇಶ. ಈ ಪ್ರಕ್ರಿಯೆ ನಿಲ್ಲಿಸದಿದ್ದರೆ ಹೋರಾಟ ನಿಶ್ಚಿತ. | ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ನೈಜ ವಿದ್ಯುತ್ ಬಳಕೆ ಪ್ರಮಾಣ ತಿಳಿದುಕೊಳ್ಳಲು, ರೈತರ ಹಿತದೃಷ್ಟಿಯಿಂದ ನೀರಾವರಿ ಪಂಪ್ ಸೆಟ್​ಗಳಿಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ. 10 ಅಶ್ವಶಕ್ತಿವರೆಗಿನ ಐ.ಪಿ.ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಕೆ ಅಬಾಧಿತ. | ಕೆ.ಜೆ.ಜಾರ್ಜ್ ಇಂಧನ ಸಚಿವ

ಸಬ್ಸಿಡಿ ಮೊತ್ತ ಏರಿಕೆ

ನೀರಾವರಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಸುತ್ತಿರುವ ಎಸ್ಕಾಂಗಳಿಗೆ ಸರ್ಕಾರ ಭರಿಸುತ್ತಿರುವ ಸಹಾಯಧನ ಮೊತ್ತ ಏರುಮುಖವಾಗಿದೆ. ಬೆಸ್ಕಾಂ ಒಂದು ಸಾವಿರ ಕೋಟಿ ರೂ. ಸೇರಿ ಐದು ಎಸ್ಕಾಂಗಳಿಗೆ ಒಟ್ಟು 2,300 ಕೋಟಿ ರೂ. ಸಬ್ಸಿಡಿ ರೂಪದ ವೆಚ್ಚ ಭರಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ರೈತರ ಅಪಸ್ವರ ಏಕೆ?

ಒಬ್ಬ ರೈತನ ಆಧಾರ್ ಸಂಖ್ಯೆಗೆ ಒಂದು ಐ.ಪಿ.ಸೆಟ್ ಜೋಡಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚಿರುವ ಐ.ಪಿ.ಸೆಟ್​ಗಳು ಹೊರಗುಳಿಯುತ್ತವೆ. ಉದಾಹರಣೆಗೆ ಒಬ್ಬ ರೈತನ 15 ಎಕರೆ ಜಮೀನಿಗೆ ಬೇಕಾದ ನೀರು ಒಂದು ಪಂಪ್​ಸೆಟ್​ನಿಂದ ಸಾಲುವುದಿಲ್ಲ. ಹೀಗಾಗಿ ಒಂದಕ್ಕಿಂತ ಹೆಚ್ಚು ಪಂಪ್​ಸೆಟ್ ಹೊಂದುವುದು ಅನಿವಾರ್ಯವಾಗುತ್ತದೆ. ಉಚಿತ ವಿದ್ಯುತ್ ಪೂರೈಸುವ ವಿಷಯದಲ್ಲಿ ಪಂಪ್​ಸೆಟ್​ಗಳ ಸಂಖ್ಯೆಗೆ ಸರ್ಕಾರ ಮಿತಿ ವಿಧಿಸಿಲ್ಲ, ಮೀಟರ್​ಗಳನ್ನು ತೆಗೆದು ಹಾಕಿದೆ. ಅಕ್ರಮ ಸಕ್ರಮ ಯೋಜನೆಯನ್ನೂ ಜಾರಿಗೊಳಿಸಿ ರೈತರಿಗೆ ಪ್ರೋತ್ಸಾಹಿಸಿತ್ತು. ಹೆಚ್ಚುವರಿ ಪಂಪ್​ಸೆಟ್​ಗಳು ಉಚಿತ ವಿದ್ಯುತ್ ಸವಲತ್ತಿನಿಂದ ವಂಚಿತವಾಗಲಿವೆ ಎಂಬ ಕಾರಣಕ್ಕೆ ಆಧಾರ್ ಜೋಡಣೆಗೆ ಅನ್ನದಾತರು ಅಪಸ್ವರ ಎತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net