

| ಶ್ರವಣ್ ಕುಮಾರ ನಾಳ ಮಂಗಳೂರು
ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ಬೆಳೆಸಾಲದ ಮಿತಿಯನ್ನು -ಠಿ;3ರಿಂದ -ಠಿ;5ಲಕ್ಷ ಏರಿಸುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದರೂ ಅನುದಾನ ಕೊರತೆಯಿಂದ ಹೆಚ್ಚುವರಿ ಸಾಲದ ಮೊತ್ತ ವಿತರಣೆಯಲ್ಲಿ ಗೊಂದಲ ಏರ್ಪಟ್ಟಿದೆ. ಶೇ.3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡದಿದ್ದರೆ ಬಡ್ಡಿ ದರ ಹೆಚ್ಚುತ್ತದೆ. ಸೆ.12ರಂದು ಸಹಕಾರ ಇಲಾಖೆಯ ಮೂಲಕ ಸಾಲಮಿತಿ ಏರಿಕೆ ಆದೇಶ ಪ್ರಕಟಿಸಲಾಗಿದೆ. ಈ ಸಾಲ 365 ದಿನಗಳ ಅವಧಿ ಹೊಂದಿದ್ದು, ಪ್ರಸಕ್ತ 2023ರ ಏ.1ರಿಂದ ಮುಂದಿನ ವರ್ಷದ ಮಾ. 31ರ ಅವಧಿಯಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಬಡ್ಡಿದರಗಳು ಅನ್ವಯವಾಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಏರಿಕೆಯಾದ ಸಾಲದ ಮೊತ್ತವನ್ನು ನಬಾರ್ಡ್ ಅಥವಾ ಜಿಲ್ಲಾ ಸಹಕಾರಿ ಬ್ಯಾಂಕ್ ವಿತರಿಸುವ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸಾಲ ಯೋಜನೆ ಇನ್ನೂ ಗೊಂದಲದಿಂದ ಕೂಡಿದೆ.
ಸ್ವಂತ ನಿಧಿಯಿಂದ ವಿತರಿಸಲು ಹಿಂದೇಟು: ಹೆಚ್ಚುವರಿ ಸಾಲ ವಿತರಣೆಗೆ 25 ಸಾವಿರ ಕೋಟಿ ರೂ. ಅಗತ್ಯವಿದೆ. ರಾಜ್ಯ ಸರ್ಕಾರ ಸಾಲದ ಮಿತಿ ಹೆಚ್ಚಿಸುವ ಕುರಿತು ಆದೇಶ ಹೊರಡಿಸಿದ್ದರೂ, ಅಗತ್ಯವಿರುವ ನಿಧಿ ಬಿಡುಗಡೆ ಮಾಡಿಲ್ಲ. ಸಹಕಾರ ಸಂಘಗಳು ತಮ್ಮ ಸ್ವಂತ ನಿಧಿಯಿಂದ ಸಾಲ ವಿತರಿಸಲು ಹಿಂದೇಟು ಹಾಕುತ್ತಿವೆ. ಬಡ್ಡಿ ರಹಿತ ಅಲ್ಪಾವಧಿ ಕೃಷಿ ಸಾಲಕ್ಕೆ ನಬಾರ್ಡ್ ನಿಂದ ಹಣ ನೀಡಲಾಗುತ್ತಿದ್ದು, ಪ್ರಸ್ತುತ ಆದೇಶದಲ್ಲಿ ಯಾವ ನಿಧಿ ಬಳಕೆಯ ಬಗ್ಗೆ ಸೂಚಿಸದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಹೆಚ್ಚಿಸಿರುವ ಮೊತ್ತದ ಸಾಲ ಪಡೆಯುವಲ್ಲಿ ಸಮಸ್ಯೆ ಎದುರಾಗಲಿದೆ.
ಅರ್ಹತೆ ಏನು?: ಸಾಲ ಪಡೆಯಲು ಅರ್ಜಿ ಸಲ್ಲಿಸುವ ರೈತ ಅಥವಾ ರೈತ ಮಹಿಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗಳಲ್ಲಿ ಸದಸ್ಯತ್ವ ಹೊಂದಿರಬೇಕು. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಸಂಘಗಳಿಗೆ ಅರ್ಜಿ ಸಲ್ಲಿಸಬೇಕು. ರೈತ ವಾಸವಿರುವ ಸ್ಥಳದ ಸಂಘ ಅಥವಾ ಭೂಮಿ ಹೊಂದಿರುವ ಸ್ಥಳದ ಸಂಘ ಇವುಗಳಲ್ಲಿ ಯಾವುದಾದರೂ ಒಂದು ಸಂಘದ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಬಹುದು. ಸದರಿ ಆರ್ಟಿಸಿ ಮೇಲೆ ಇತರೆ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದಿರಬಾರದು. ರೈತರು ಸಂಘ ನಿಗದಿಪಡಿಸಿದ ಗಡುವಿನ ವಿನಾಂಕದೊಳಗೆ ಅಸಲು ಮರುಪಾವತಿಸಬೇಕು.
ಏನಿದು ಬಡ್ಡಿ ಇಲ್ಲದ ಸಾಲ?: ರಾಜ್ಯದ ರೈತರಿಗೆ ಸರ್ಕಾರ ಶೇ.3ರ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಅನುಷ್ಠಾನಗೊಳಿಸಿತ್ತು. 2012-13ನೇ ಸಾಲನಲ್ಲಿ ಒಂದು ಲಕ್ಷ ರೂಪಾಯಿವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುವ ಯೋಜನೆ ಜಾರಿಗೊಳಿಸಿದೆ. 2013-14ನೇ ಸಾಲಿನಿಂದ ಎರಡು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲದ ಮಿತಿ ವಿಸ್ತರಿಸಲಾಯಿತು. ಬಳಿಕ 2014-15ನೇ ಸಾಲಿನಿಂದ ಮೂರು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಇದನ್ನು ಐದು ಲಕ್ಷ ರೂ.ಗೆ ಹೆಚ್ಚಿಸಿತ್ತು. ಆದರೆ ಅದು ಅನುಷ್ಠಾನಗೊಳ್ಳುವ ಮೊದಲೇ ಚುನಾವಣೆ ಬಂದು ಹೊಸ ಸರ್ಕಾರ ರಚನೆಯಾಯಿತು.