

Ola Bike : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಂಗತಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಯುವತಿಯೊಬ್ಬಳು ಮಾಡಿರುವ ಕೆಲಸ ನೆಟ್ಟಿಗರನ್ನು ಬೆರಗುಗೊಳಿಸಿದೆ. ಅಷ್ಟಕ್ಕೂ ಆಕೆ ಏನು ಮಾಡಿದಳು ಅಂದರೆ, ಕೇವಲ 180 ಮೀಟರ್ ದೂರ ಕ್ರಮಿಸಲು ಓಲಾ ಬೈಕ್ ಬುಕ್ ಮಾಡಿದ್ದಾಳೆ. ನಡೆದುಕೊಂಡು ಹೋದರೆ ಅಷ್ಟು ದೂರ ಕ್ರಮಿಸಲು ಎರಡು ನಿಮಿಷ ಸಹ ಆಗುವುದಿಲ್ಲ. ಅಂಥದರಲ್ಲಿ ಇಷ್ಟು ಸಣ್ಣ ಪ್ರಯಾಣಕ್ಕೆ ಅವಳು ಬೈಕ್ ಬುಕ್ ಮಾಡಲು ಕಾರಣ ಏನೆಂಬುದನ್ನು ತಿಳಿದ್ರೆ ನಿಮಗೆ ಆಶ್ಚರ್ಯವಾಗುವುದು ಖಚಿತ.
ಓಲಾ ಬೈಕ್ ಸವಾರನೊಬ್ಬ ಈ ತಮಾಷೆಯ ವಿಡಿಯೋವನ್ನು ರೆಕಾರ್ಡ್ ಮಾಡಿ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಬೈಕ್ ಸವಾರ ಮತ್ತು ಯುವತಿಯ ನಡುವಿನ ಸಂಭಾಷಣೆ ಈ ಕೆಳಕಂಡಂತಿದೆ.
* ಬೈಕ್ ಸವಾರ (ನಕ್ಷೆಯನ್ನು ನೋಡಿ ಆಶ್ಚರ್ಯಚಕಿತನಾಗಿ): ಮೇಡಂ, ನೀವು ವಿಳಾಸವನ್ನು ಸರಿಯಾಗಿ ನಮೂದಿಸಿದ್ದೀರಾ? ಅದು ತುಂಬಾ ಹತ್ತಿರದಲ್ಲಿದೆ ಎಂದು ತೋರಿಸುತ್ತದೆ.
* ಯುವತಿ (ತುಂಬಾ ಶಾಂತವಾಗಿ): ಹೌದು, ನಾನು ಸರಿಯಾಗೆ ನಮೂದಿಸಿದ್ದೇನೆ.
* ಬೈಕ್ ಸವಾರ (ನಗುತ್ತಾ): ನೀವು ಯಾಕೆ ಇಷ್ಟು ಕಡಿಮೆ ದೂರಕ್ಕೆ ಬೈಕ್ ಬುಕ್ ಮಾಡಿದ್ದೀರಿ ಮೇಡಂ?
ಈ ವೇಳೆ ಯುವತಿಯ ಉತ್ತರ ಕೇಳಿ ಸವಾರನಿಗೆ ನಗು ತಡೆಯಲಾಗಲಿಲ್ಲ. ಯುವತಿ ನೀಡಿದ ಕಾರಣ ತುಂಬಾ ಸರಳವಾಗಿತ್ತು. ಆ ಕಾರಣ ಅನೇಕರಿಗೆ ಇಷ್ಟ ಸಹ ಆಗುತ್ತದೆ. ಅಷ್ಟಕ್ಕೂ ಆ ಯುವತಿ ಕೊಟ್ಟ ಉತ್ತರ ಏನು ಅಂದರೆ, ಈ ಪ್ರದೇಶದಲ್ಲಿ ಬಹಳಷ್ಟು ಬೀದಿ ನಾಯಿಗಳಿವೆ. ಅವು ನನ್ನನ್ನು ಕಂಡರೆ ಬೆನ್ನಟ್ಟುತ್ತವೆ ಮತ್ತು ನನಗೆ ತುಂಬಾ ಭಯವಾಗುತ್ತದೆ. ಅದಕ್ಕಾಗಿಯೇ ನಾನು ಬೈಕ್ ಬುಕ್ ಮಾಡಿದೆ ಎಂದಳು. 180 ಮೀಟರ್ ದೂರದ "ಸುರಕ್ಷಿತ" ಪ್ರಯಾಣಕ್ಕೆ ಆಯುವತಿ ಪಾವತಿಸಿದ ಒಟ್ಟು ಮೊತ್ತ ಕೇವಲ 19 ರೂಪಾಯಿ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್ ವಿಭಾಗವು ನಗೆಯಿಂದ ತುಂಬಿತ್ತು. ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಓರ್ವ ಬಳಕೆದಾರ, ಇದು ನಿಜವಾದ ತಂತ್ರಜ್ಞಾನ! ನೀವು ತಂತ್ರಜ್ಞಾನವನ್ನು ಸರಿಯಾಗಿ ಬಳಸುವುದು ಹೇಗೆಂದು ಅವಳನ್ನು ನೋಡಿ ಕಲಿಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ, ನಾನು ಇಡೀ ವಿಡಿಯೋವನ್ನು ನೋಡಿದೆ ಆದರೆ, ಒಂದೇ ಒಂದು ನಾಯಿಯನ್ನು ನೋಡಲಿಲ್ಲ ಎಂದು ವ್ಯಂಗ್ಯವಾಡಿದರು. ಕೆಲವರು ಯುವತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುರಕ್ಷತೆಯೇ ಮೊದಲು. ಆಕೆಯ ಭಯವನ್ನು ಕಡಿಮೆ ಅಂದಾಜು ಮಾಡಲಾಗದು. ನಿಜವಾಗಿಯೂ ಆಕೆ ಒಳ್ಳೆ ಕೆಲಸ ಮಾಡಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬೀದಿ ನಾಯಿಗಳ ಭಯದಿಂದ ಯುವತಿ ತೆಗೆದುಕೊಂಡ ಈ ಸಣ್ಣ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂತ್ರಜ್ಞಾನವನ್ನು ಹೇಗೆಲ್ಲ ಬಳಸುತ್ತಾರೆ ಎಂಬುದಕ್ಕೆ ಇದು ಒಂದು ತಮಾಷೆಯ ಉದಾಹರಣೆಯಾಗಿದೆ. (ಏಜೆನ್ಸೀಸ್)