ಪ್ರತಿ ಶನಿವಾರದಂದೇ 7 ಬಾರಿ ಯುವಕನಿಗೆ ಹಾವು ಕಚ್ಚಿದ್ದೇಕೆ? ಕೊನೆಗೂ ಬಯಲಾಯ್ತು ಸ್ಫೋಟಕ ಸತ್ಯ

Snake Bite
Published on

ಲಖನೌ: ಯುವಕನೊಬ್ಬನಿಗೆ ಕೇವಲ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿದ ಸುದ್ದಿ ಈ ಹಿಂದೆ ಬಹಳ ಚರ್ಚೆಯಾಗಿತ್ತು. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೌರಾ ಗ್ರಾಮದ 24 ವರ್ಷದ ವಿಕಾಸ್ ದ್ವಿವೇದಿ, ಕಳೆದ ಒಂದೂವರೆ ತಿಂಗಳಲ್ಲಿ ಅದರಲ್ಲೂ ಪ್ರತಿ ಶನಿವಾರವೇ ಏಳು ಬಾರಿ ಹಾವು ಕಚ್ಚಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣದ ಅಸಲಿಯತ್ತು ಹೊರಬಿದ್ದಿದೆ.

ನನಗೆ ಏಳು ಬಾರಿ ಹಾವು ಕಚ್ಚಿದೆ ಎಂದು ಯುವಕ ಹೇಳುತ್ತಿರುವುದು ಅಕ್ಷರಶಃ ಸುಳ್ಳು ಎಂದು ತಜ್ಞರ ಸಮಿತಿ ಹೇಳಿದೆ. ಯುವಕನಿಗೆ ಒಂದು ಬಾರಿ ಮಾತ್ರ ಹಾವು ಕಚ್ಚಿದೆ. ಆ ಬಳಿಕವೂ ಹಾವಿನ ಭಯದಲ್ಲಿದ್ದ ಆತನಿಗೆ ಪದೇಪದೆ ಹಾವು ಕಚ್ಚಿದ ಅನುಭವವಾಗಿದೆ. ಯುವಕನಿಗೆ ಒಫಿಡಿಯೋಫೋಬಿಯಾ (ಹಾವುಗಳ ಅತಿಯಾದ ಭಯ) ರೋಗವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ವಿಕಾಸ್​, ಶನಿವಾರ ಮಾತ್ರ ಹಾವು ಕಡಿಯುತ್ತದೆ ಎಂದು ತಜ್ಞರ ಸಮಿತಿ ಮುಂದೆ ಹೇಳಿದ್ದನು.

ಜೂನ್ 2ರಂದು ಸಂಜೆ, ವಿಕಾಸ್‌ಗೆ ಮೊದಲ ಬಾರಿ ಹಾವು ಕಚ್ಚಿದೆ. ಈ ಘಟನೆ ನಡೆದ ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ವಿಕಾಸ್​​ಗೆ ಚಿಕಿತ್ಸೆ ನೀಡಲಾಗಿತ್ತು. ಶೀಘ್ರ ಗುಣಮುಖರಾಗಿ ವಿಕಾಸ್ ಮನೆಗೆ ಮರಳಿದ್ದರು. ಅಲ್ಲಿಂದ ಜುಲೈ 6ರವರೆಗೆ ಯುವಕನಿಗೆ ಇನ್ನೂ ಐದು ಬಾರಿ ಹಾವು ಕಚ್ಚಿದ ಅನುಭವವಾಗಿದೆ.

ನಾಲ್ಕನೇ ಬಾರಿ ಹಾವು ಕಚ್ಚಿದ ಅನುಭವವಾದಾಗ ಮನೆ ಬಿಟ್ಟು ಬೇರೆಡೆ ವಾಸಿಸುವಂತೆ ವಿಕಾಸ್​ಗೆ ಸೂಚಿಸಲಾಗಿತ್ತು. ರಾಧಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿದ ವಿಕಾಸ್​ಗೆ ಐದನೇ ಬಾರಿ ಹಾವು ಕಚ್ಚಿದ ಅನುಭವವಾಗಿದೆ. ಇದರಿಂದ ಹೆದರಿದ ಪಾಲಕರು ಆತನನ್ನು ಮನೆಗೆ ಕರೆತಂದರು. ಇದಾದ ಬಳಿಕವೂ ಮತ್ತೆ ಎರಡು ಬಾರಿ ಹಾವು ಕಚ್ಚಿದ ಅನುಭವ ವಿಕಾಸ್​ಗೆ ಆಗಿದೆ.

ಮಗನ ಚಿಕಿತ್ಸೆಗಾಗಿ ಕುಟುಂಬಸ್ಥರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆರ್ಥಿಕ ನೆರವು ಕೋರಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಅಸಾಮಾನ್ಯ ಎಂದು ಬಣ್ಣಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್, ವೈದ್ಯರು, ಅರಣ್ಯ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದರು ಮತ್ತು ತನಿಖೆಗೆ ಆದೇಶಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿದ ಸಮಿತಿಯು ಯುವಕನಿಗೆ ಒಫಿಡಿಯೋಫೋಬಿಯಾ ಕಾಯಿಲೆ ಎಂದು ಕಂಡುಹಿಡಿದಿದೆ. ಅಂದರೆ, ಹಾವುಗಳೆಂದರೆ ಯುವಕನಿಗೆ ಭಯ. ಹೀಗಾಗಿ ಒಮ್ಮೆ ಕಚ್ಚಿದ್ದಕ್ಕೆ ಮತ್ತೆ ಮತ್ತೆ ಅದೇ ಅನುಭವ ಆತನಿಗಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net