ಟೊಮ್ಯಾಟೊಗೆ ಕಾಯಿಕೊರಕ ಹುಳು ಬಾಧೆ

tomato feb 12 2020
Published on

ಬೆಂಗಳೂರು: ಎ, ಬಿ ಮತ್ತು ಸಿ ಜೀವಸತ್ವವನ್ನು ಒದಗಿಸುವ ಟೊಮ್ಯಾಟೊ ವನ್ನು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊಗೆ ಕಾಯಿಕೊರಕ ಹುಳುವಿನ ಬಾಧೆೆ ಕಾಣಿಸಿಕೊಂಡಿದೆ. ಇದರಿಂದ ಶೇ.80 ಬೆಳೆ ಹಾನಿಯಾಗಿದೆ. ಹೀಗಾಗಿ, ತೋಟಗಾರಿಕೆ ಇಲಾಖೆಯು ರೈತರಿಗೆ ಕಾಯಿಕೊರಕ ಹುಳು ಬಾಧೆ ತಡೆಗಟ್ಟಲು ಸೂಕ್ತ ಸಲಹೆ ನೀಡಿದೆ.

ಟೊಮ್ಯಾಟೊ ನಡುವೆ ಚೆಂಡುಹೂವು: 20-25 ದಿನಗಳ ಟೊಮ್ಯಾಟೊ ಸಸಿಗಳ 16 ಸಾಲುಗಳ ಬಳಿಕ ಒಂದು ಸಾಲಿನಂತೆ 45-50 ದಿನಗಳ ಚೆಂಡು ಹೂವಿನ ಸಸಿಗಳನ್ನು ಏಕಕಾಲಕ್ಕೆ ನಾಟಿ ಮಾಡಬೇಕು. ಟೊಮ್ಯಾಟೊ ಬೆಳೆಯಲ್ಲಿ ಪ್ರತಿ ಎರಡು ಸಾಲುಗಳ ಮಧ್ಯೆ ಒಂದು ಸಾಲು ಮೂಲಂಗಿ ಬೆಳೆ ಬೆಳೆಯಬೇಕು. ಸಸಿ ನಾಟಿ ಮಾಡಿದ 20-25 ದಿನಗಳ ನಂತರ (ಹೂ ಬಿಡುವಾಗ) ಪ್ರತಿ ಹೆಕ್ಟೇರಿಗೆ 250 ಕೆ.ಜಿ. ಬೇವಿನ ಹಿಂಡಿಯನ್ನು ಭೂಮಿಗೆ ಸೇರಿಸುವುದರಿಂದ ಕಾಯಿಕೊರಕದ ಜತೆಗೆ ಜಂತು ಹುಳು ಹಾಗೂ ಎಲೆಸುರಂಗ ಕೀಟದ ಬಾಧೆಯನ್ನು ತಡೆಗಟ್ಟಬಹುದು. ಮೋಹಕ ಬಲೆಗಳನ್ನು ಪ್ರತಿ ಹೆಕ್ಟೇರಿಗೆ 5ರಂತೆ ಅಳವಡಿಸುವುದರಿಂದ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು. ಮೊದಲ ಹಂತದ ಮರಿಹುಳುಗಳನ್ನು ನಾಶಪಡಿಸಲು ಶೇ.5 ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಬಾಧೆಗೆ ಒಳಗಾದ ಹಣ್ಣುಗಳನ್ನು ಕಿತ್ತು ನಾಶಪಡಿಸಬೇಕು.

ಜೈವಿಕ ಪೀಡೆ ನಾಶಕ ಸಿಂಪಡಿಸಿ: ಟೊಮ್ಯಾಟೊ ಸಸಿ ನಾಟಿ ಮಾಡಿದ 28ರಿಂದ 42 ದಿನಗಳ ನಂತರ ಜೈವಿಕ ಪೀಡೆನಾಶಕ ಹೆಲಿಯೋಥಿಸ್ ಎನ್​ಪಿವಿಯನ್ನು ಪ್ರತಿ ಹೆಕ್ಟೇರಿಗೆ 250 ಕೆ.ಜಿ. ಜತೆಗೆ ಶೇ.1 ಬೆಲ್ಲವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಂಜೆ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 1 ಲಕ್ಷದಂತೆ ಟ್ರೖೆಕೊಗ್ರಾಮ ಪ್ರಿಟಿಯೋಸಮ್ ಜೈವಿಕ ನಿಯಂತ್ರಕವನ್ನು 4-5 ಸಲ ಹೂ ಬಿಡುವ ಹಂತದಿಂದ ಪ್ರಾರಂಭಿಸಿ ಪ್ರತಿ ವಾರಕೊಮ್ಮೆ ಬಿಡುವುದರಿಂದ ಕಾಯಿಕೊರಕ ಹುಳುವನ್ನು ನಿಯಂತ್ರಿಸಬಹುದು. 0.3 ಮಿಲಿ ಲೀಟರ್ ಕ್ವಿನಾಲ್ ಫಾಸ್ 14.5 ಎಸ್.ಸಿ ಅಥವಾ 2 ಮಿಲಿ ಲೀಟರ್ ಕ್ವಿನಾಲ್ ಫಾಸ್ 25 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವಂತೆ ತೋಟಗಾರಿಕೆ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂ:080-2677997 ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net