

ಬೆಂಗಳೂರು: ಮಲ್ಲೇಶ್ವರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು ೪೫ ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಆಕೆಯ ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಮಂಗಳವಾರ ಬೆಳಗ್ಗೆ ೭.೩೦ರ ಸುಮಾರಿಗೆ ಮಾರ್ಗೊಸಾ ರಸ್ತೆಯ ೧೫ನೇ ಕ್ರಾಸ್‌ನಲ್ಲಿರುವ ಸಾಯಿ ಕೃಪಾ ಅಪಾರ್ಟ್‌ಮೆಂಟ್‌ನ ೩ ಮತ್ತು ೪ನೇ ಮಹಡಿ ಮಧ್ಯದ ಮೆಟ್ಟಿಲುಗಳ ಬಳಿ ಇರುವ ಕಬ್ಬಿಣ ಗ್ರೀಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಮಲ್ಲೇಶ್ವರ ಠಾಣೆ ಪೊಲೀಸರು, ಮಹಿಳೆಯ ಪೋಟೋ ಪಡೆದುಕೊಂಡಿದ್ದಾರೆ. ಆಕೆಯ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಯಾವುದೇ ಮಾಹಿತಿ ಇಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಆಕೆ ನೇರವಾಗಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೃತ ಮಹಿಳೆಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಹಿಳೆ ಬಂದ ಹಾದಿಯನ್ನು ಪರಿಶೀಲಿಸಿದಾಗ ಮಂಗಳವಾರ ಬೆಳಗ್ಗೆ ೫.೩೦ರ ಸುಮಾರಿಗೆ ಮೆಜೆಸ್ಟಿಕ್‌ನಿಂದ ಹರಿಶ್ಚಂದ್ರ ಘಾಟ್‌ವರೆಗೆ ಒಂದು ಬಸ್‌ನಲ್ಲಿ ಬಂದಿದ್ದು, ನಂತರ ಇಲ್ಲಿಂದ ಮಾರ್ಗೊಸ್ ರಸ್ತೆಗೆ ಮತ್ತೊಂದು ಬಸ್‌ನಲ್ಲಿ ಬಂದಿದ್ದಾಳೆ. ನಂತರ ಕಾಡು ಮಲ್ಲೇಶ್ವರ ದೇವಾಲಯಕ್ಕೂ ಹೋಗಿದ್ದಾಳೆ. ಬಳಿಕ ೭.೩೦ರ ಸುಮಾರಿಗೆ ೧೫ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್ ಒಳಗೆ ಹಗ್ಗದ ಜತೆಗೆ ಬಂದ ಮಹಿಳೆ, ಮೆಟ್ಟಿಲುಗಳ ಬಳಿಯ ಕಬ್ಬಿಣ ಗ್ರೀಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನಿಖೆ ವೇಳೆ ಮೃತಳು, ಕಳೆದ ಮೂರು ದಿನಗಳಿಂದ ಅಪಾರ್ಟ್‌ಮೆಂಟ್ ಸುತ್ತ-ಮುತ್ತ ಓಡಾಟ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ. ಭಾನುವಾರ ಕೂಡ ನವರಂಗ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದು, ಬಳಿಕ ಮಲ್ಲೇಶ್ವರ ೧೦ನೇ ಕ್ರಾಸ್‌ಗೆ ಬಂದಿದ್ದಾಳೆ. ಸೋಮವಾರ ಕೂಡ ಮಲ್ಲೇಶ್ವರ ಸಮೀಪದಲ್ಲಿ ಓಡಾಟ ನಡೆಸಿರುವುದು ಪತ್ತೆಯಾಗಿದೆ. ಇನ್ನು ಆಕೆ ಮಂಗಳವಾರ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದಳು ಎಂಬುದಕ್ಕೆ ಆಕೆ ಬಳಿ ಹೂ, ಅರಿಶಿನ-ಕುಂಕುಮ ಹಾಗೂ ಪೂಜಾ ಸಾಮಾಗ್ರಿ ಪತ್ತೆಯಾಗಿದೆ. ನವರಂಗ್ ಚಿತ್ರಮಂದಿರದ ಸಿನಿಮಾ ಟೆಕೆಟ್‌ಗಳು ಪತ್ತೆಯಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.