

ಈ ಮಹಿಳೆಯ ಪರಿವಾರದ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸುತ್ತಾರೆ. ಆಗ ಮಹಿಳೆಯು ತನಗೆ ತಾಯಿ, ತಂದೆ, ಪತಿ ಮತ್ತು ಓರ್ವ ಪುತ್ರನಿದ್ದಾನೆ ಎಂಬ ಮಾಹಿತಿಯನ್ನು ನೀಡುತ್ತಾಳೆ. ಚಟುವಟಿಕೆಯನ್ನು ಮುಂದುವರಿಸುತ್ತಾ, ಈಗ ನೀವು ನಿಮ್ಮ ಜೀವನದಲ್ಲಿ ತುಂಬಾ ಮುಖ್ಯವೆನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಿರಿ ಎನ್ನುವ ಸೂಚನೆಯನ್ನು ಮನೋವೈದ್ಯರು ಆಕೆಗೆ ನೀಡುತ್ತಾರೆ. ಅಂತೆಯೇ ಆ 30 ಹೆಸರುಗಳನ್ನು ಆ ಮಹಿಳೆ ಬರೆಯುತ್ತಾಳೆ. ಅದರಲ್ಲಿ ಆಕೆಯ ಕುಟುಂಬದ ಸದಸ್ಯರು, ಬಂಧು ಮಿತ್ರರು, ಸಹೋದ್ಯೋಗಿಗಳು, ನೆರೆಕೆರೆಯವರು-ಹೀಗೆ ಎಲ್ಲರ ಹೆಸರುಗಳಿದ್ದವು.
ಆಟ ಮುಂದುವರಿಯುತ್ತದೆ. ಮುಂದೆ ಇವುಗಳ ಪೈಕಿ ನಿಮಗೆ ಮುಖ್ಯವೆನಿಸದ ಹತ್ತು ಹೆಸರುಗಳನ್ನು ಅಳಿಸಿ ಎನ್ನಲಾಗಿ, ಆಕೆ ತನ್ನ ದೂರದ ಸಂಬಂಧಿಕರ ಹತ್ತು ಹೆಸರುಗಳನ್ನು ಅಳಿಸುತ್ತಾಳೆ. ಮತ್ತೊಮ್ಮೆ ಈ ಪ್ರಕ್ರಿಯೆ ನಡೆಯುತ್ತದೆ. ಕೊನೆಗೆ ನಾಲ್ಕು ಹೆಸರುಗಳು ಮಾತ್ರ ಬೋರ್ಡಿನಲ್ಲಿ ಉಳಿಯುತ್ತವೆ. ಅವುಗಳೆಂದರೆ, ಆಕೆಯ ತಾಯಿ-ತಂದೆ, ಪತಿ ಮತ್ತು ಇರುವ ಏಕೈಕ ಪುತ್ರನ ಹೆಸರುಗಳು!. ಅಷ್ಟರಲ್ಲಿ ಇಡೀ ಸಭೆ ಸ್ತಬ್ಧವಾಗಿತ್ತು. ಏಕೆಂದರೆ ಇದು ಬರೀ ಅಳಿಸುವ ಆಟವಾಗಿರಲಿಲ್ಲ! ಯಾರು ನಮ್ಮ ಜೊತೆ ಜೀವನದಲ್ಲಿ ಕೊನೇ ತನಕ ಇರಬೇಕು ಎಂಬುದರ ಬಗ್ಗೆ ತಿಳಿಸುವ ಪಾಠವಾಗಿತ್ತು. ಮತ್ತೆ ಮನೋಶಾಸ್ತ್ರಜ್ಞರು ತನಗೆ ಅತ್ಯವಶ್ಯಕವೆನಿಸದ ಇನ್ನೆರಡು ಹೆಸರುಗಳನ್ನು ಅಳಿಸಲು ಹೇಳುತ್ತಾರೆ.
ಇದು ನಿಜಕ್ಕೂ ಆಕೆಗೆ ಒಂದು ಸವಾಲಾಗಿತ್ತು. ಆದರೂ ಅತ್ಯಂತ ಕಷ್ಟದಿಂದ ಆಕೆ ತನ್ನ ತಾಯಿ ತಂದೆಯ ಹೆಸರುಗಳನ್ನು ಅಳಿಸುತ್ತಾಳೆ. ಈಗ ಉಳಿದಿದ್ದು ತನ್ನ ಗಂಡ ಮತ್ತು ಏಕೈಕ ಮಗನ ಹೆಸರುಗಳು ಮಾತ್ರ. ಇವರಿಬ್ಬರ ಪೈಕಿ ದಯವಿಟ್ಟು ಒಬ್ಬರ ಹೆಸರನ್ನು ಅಳಿಸಿ ಎನ್ನಲಾಗಿ, ಆ ಮಹಿಳೆಯ ಕೈಗಳು ನಡುಗಲಾರಂಭಿಸಿದವು. ಆದರೂ ತೇವಗೊಂಡ ಕಣ್ಣುಗಳಿಂದ ಆಕೆ ತನ್ನ ಮಗನ ಹೆಸರನ್ನು ಅಳಿಸಿಬಿಡುತ್ತಾಳೆ. ಹಾಗೂ ನಂತರ ಜೋರಾಗಿ ಅತ್ತು ಬಿಡುತ್ತಾಳೆ. ಅಚ್ಚರಿಗೊಂಡ ಮನೋವೈದ್ಯರು ಆಕೆಯನ್ನು ಕೇಳುತ್ತಾರೆ: ನಿಮ್ಮ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡಿರಿ? ನಿಮ್ಮ ತಂದೆ ತಾಯಿ ನಿಮಗೆ ಜನ್ಮವಿತ್ತು ನಿಮ್ಮನ್ನು ಸಾಕಿ ಸಲಹಿದವರವಲ್ಲವೇ? ಮತ್ತು ಇರುವ ಒಬ್ಬನೇ ಒಬ್ಬ ಮಗ ವೃದ್ಧಾಪ್ಯದಲ್ಲಿ ನಿಮ್ಮನ್ನು ನೋಡಿಕೊಳ್ಳಲು ಬೇಡವೇ?
ಓರ್ವ ಮಹಿಳೆಗೆ ಬಾಲ್ಯದಲ್ಲಿ ಹೆತ್ತವರ, ಯೌವನದಲ್ಲಿ ಗಂಡನ, ಮತ್ತು ವೃದ್ಧಾಪ್ಯದಲ್ಲಿ ಮಗನ ಆಸರೆ ಅವಶ್ಯವೆಂಬುದು ನಿಮಗೆ ತಿಳಿಯದೇ? ಗಂಡ ಇಲ್ಲವಾದರೆ, ನೀವು ಮರುಮದುವೆ ಮಾಡಿಕೊಳ್ಳಬಹುದು. ಆದರೆ ಹೆತ್ತವರನ್ನು, ಮಗನನ್ನು ಕಳೆದುಕೊಂಡರೆ ಮರಳಿ ಪಡೆಯಲಾದೀತೇ? ಎಂಬ ಪ್ರಶ್ನೆಗಳನ್ನು ಅವಳ ಮುಂದಿಡುತ್ತಾರೆ. ಮಹಿಳೆಯ ಉತ್ತರಕ್ಕಾಗಿ ಇಡೀ ಸಭೆ ಉಸಿರು ಬಿಡದೇ ಕಾಯುತ್ತಿತ್ತು. ಕಣ್ಣೀರು ಒರೆಸಿಕೊಂಡು, ಆಕೆ ಶಾಂತಳಾಗಿ ಹೇಳಿದಳು. ‘ಸರ್, ವಯಸ್ಸಾದ ಹೆತ್ತವರು ಒಂದಲ್ಲ ಒಂದು ದಿನ ನಮ್ಮನ್ನು ಅಗಲಿ, ಇಹಲೋಕ ತ್ಯಜಿಸಲಿರುವವರೇ. ಮತ್ತೆ ಕೊಂಬೆಗಳು ಮರದ ಕಾಂಡದಿಂದ ದೂರವಾಗುವ ರೀತಿಯಲ್ಲಿ ದೊಡ್ಡವರಾದಂತೆ, ಮಕ್ಕಳು ಕೂಡಾ ನಾನಾ ಕಾರಣಗಳಿಂದ ನಮ್ಮನ್ನು ತೊರೆದು ಹೋಗುವವರೇ’.
ಆಕೆ ಮಾತು ಮುಂದುವರಿಸಿದಳು: ಜೀವನದಲ್ಲಿ ಕೊನೆಗೆ ಸಿಗುವುದು ಗಂಡನಿಗೆ ಹೆಂಡತಿ ಮತ್ತು ಹೆಂಡತಿಗೆ ಗಂಡ ಮಾತ್ರ. ಈ ನನ್ನ ಗಂಡ, ನನ್ನ ಕೈ ಹಿಡಿದವರು ಮಾತ್ರವಲ್ಲ. ಕೊನೆಯ ಕ್ಷಣದವರೆಗೆ ಹಿಡಿದ ಕೈ ಬಿಡದ ನನ್ನ ಬಾಳ ಸಂಗಾತಿ ಹಾಗೂ ನನ್ನ ಆತ್ಮದ ಸಂಗಾತಿ. ಅವರನ್ನು ಬಿಟ್ಟಿರಲಾದೀತೇ?’
ಒಂದು ಹೆಣ್ಣಿಗೊಂದು ಗಂಡು,
ಹೇಗೊ ಏನೊ ಹೊಂದಿಕೊಂಡು
ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೇ?
ಎಂದು ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಹೇಳಿದ್ದು ಇದಕ್ಕೇ ಅಲ್ಲವೇ? ಹಾಗೆಯೇ ‘ನೂರ ಒಂದು ಕನಸ ಕಂಡು, ಸುದೀರ್ಘ ವರ್ಷ ಕಳೆದೆವಲ್ಲ; ಇದು ಏನು ಸಣ್ಣ ವಿಷಯವೇ? ಇದ್ದಷ್ಟು ದಿನ ಅವರ ಜತೆಯಲ್ಲಿಯೇ ಇರುತ್ತೇನೆ...’ ಎಂಬ ಮಹಿಳೆಯ ಮಾತು ವಾಸ್ತವವನ್ನು ತೆರೆದಿಟ್ಟಿತ್ತು. ಜೀವನದ ಈ ಸತ್ಯವನ್ನು ಕೇಳಿದ ಸಭೆ ಎದ್ದು ನಿಂತು ಚಪ್ಪಾಳೆ ತಟ್ಟಿ ಸಮ್ಮತಿ ಸೂಚಿಸಿತು.