

ಒಬ್ಬರಿನ್ನೊಬ್ಬರಲ್ಲಿ ತಪ್ಪುಗಳನ್ನು ಕೊರತೆಗಳನ್ನು ಕಾಣಲಾರಂಭಿಸಿದರು. ಒಂದೇ ತಾಯಿಯ ಮಕ್ಕಳಾಗಿ ಹುಟ್ಟಿ, ಒಂದೇ ಪರಿಸರದಲ್ಲಿ ಬೆಳೆದ ಅಣ್ಣ ತಮ್ಮ, ಅಕ್ಕ-ತಂಗಿಯರ ನಡುವೆಯೇ ವ್ಯತ್ಯಾಸಗಳಿರುವಾಗ, ಭಿನ್ನ ಭಿನ್ನ ಕೌಟುಂಬಿಕ, ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಿಂದ, ಗಂಡ ಹೆಂಡತಿಯರ ರೂಪದಲ್ಲಿ ಒಂದಾದ ದಂಪತಿಗಳ ನಡುವೆ ಏನೇನೂ ಭಿನ್ನಾಭಿಪ್ರಾಯವಿಲ್ಲದಿರಲು ಹೇಗೆ ಸಾಧ್ಯ? ಸಹಜವಾಗಿ ಭಿನ್ನಾಭಿಪ್ರಾಯಗಳು ಆಗಾಗ ಚರ್ಚೆ, ವಾಗ್ವಾದಗಳ ರೂಪವನ್ನು ಪಡೆಯಲಾರಂಭಿಸಿದುವು. ಇದು ತೀವ್ರ ಸ್ವರೂಪವನ್ನು ಪಡೆದಾಗ, ಗಂಡ ಹೆಂಡತಿಯರ ನಡುವೆ ಮಾತುಕತೆಯೇ ನಿಂತುಹೋಯಿತು. ಮಕ್ಕಳು ಇಲ್ಲವೇ ಕೆಲಸದವರ ಮೂಲಕವೇ ಸಂಭಾಷಣೆ ನಡೆಯಲಾರಂಭಿಸಿದುವು. ಇದನ್ನು ಬಗೆಹರಿಸಿಕೊಳ್ಳುವ, ಪರಿಹರಿಸಿಕೊಳ್ಳುವ ಜಾಣ್ಮೆಯಾಗಲೀ, ತಾಳ್ಮೆಯಾಗಲೀ ಇಬ್ಬರಲ್ಲೂ ಇಲ್ಲವಾಯಿತು.
ಇಂತಹ ವಾತಾವರಣ, ಮನೆಯ ಶಾಂತಿಗೂ, ಇಬ್ಬರ ಮಾನಸಿಕ ನೆಮ್ಮದಿಗೂ ಅಡ್ಡಿಯಾಗುತ್ತಿತ್ತು. ಮಕ್ಕಳಿಗೂ ಇದು ಅಸಹನೀಯ, ಅಪ್ರಿಯ ವಿಷಯವಾಗಿತ್ತು. ಆದರೆ, ಅವರಾದರೂ ಏನು ಮಾಡಬೇಕು? ಯಾರ ಪರವಾಗಿ ನಿಲ್ಲಬೇಕು? ಯಾರಿಗೆ ಬುದ್ಧಿ ಹೇಳಬೇಕು? ಆದುದರಿಂದ ಸುಮ್ಮನಾಗಿಬಿಡುತ್ತಿದ್ದರು ಹಾಗೂ ಅಪ್ಪ ಅಮ್ಮ ರಾಜಿ ಮಾಡಿಕೊಳ್ಳುವ ಸಂತಸದ ಕ್ಷಣಗಳಿಗಾಗಿ ಕಾಯುತ್ತಿದ್ದರು. ಗಂಡ ಹೆಂಡತಿಯರಿಬ್ಬರೂ, ಬಿಗುಮಾನದ ಬೇಗುದಿಯಲ್ಲಿ ಬೇಯುತ್ತಿದ್ದರು. ತನ್ನಲ್ಲಿಯೂ ತಪ್ಪಾಗಿದೆಯೇ, ತಾನು ವಾದ ಮಾಡುವುದೆಲ್ಲವೂ ಸರಿಯೇ ಎಂಬುದನ್ನು ಅರಿತುಕೊಳ್ಳುವ ವಿವೇಚನೆಯೇ ಇಲ್ಲವಾಗಿತ್ತು. ತಾನೇನಾದರೂ ತನ್ನ ತಪ್ಪನ್ನು ಇಲ್ಲವೇ ತನ್ನ ಬಾಳ ಸಂಗಾತಿಯ ವಾದವನ್ನು ಒಪ್ಪಿಕೊಂಡು ಬಿಟ್ಟರೆ, ಶರಣಾಗತನಾದುಂತಾಯಿತಲ್ಲವೇ ಎಂಬ ಬಿಂಕ ಬೇರೆ. ಆದರೆ ಈ ಪರಿಸ್ಥಿತಿ ಎಷ್ಟು ದಿನ ಮುಂದುವರಿಯಲು ಸಾಧ್ಯ?
ಇಬ್ಬರಿಗೂ ಎರಡೇ ಆಯ್ಕೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿದುವು-ಒಂದೋ, ಡೈವೋರ್ಸ್ ಮಾಡಿಕೊಂಡು ಒಬ್ಬರಿನ್ನೊಬ್ಬರಿಂದ ಶಾಶ್ವತವಾಗಿ ದೂರ ಇದ್ದುಬಿಡುವುದು. ಇಲ್ಲಾ, ತಮ್ಮ ತಪ್ಪನ್ನು ಒಪ್ಪಿಕೊಂಡು, ಸಂಬಂಧವನ್ನು ಸರಿಪಡಿಸಿಕೊಳ್ಳುವುದು. ವಿವಾಹ ವಿಚ್ಛೇದನ ಮಾಡಿಕೊಂಡರೆ, ಮಕ್ಕಳ ಭವಿಷ್ಯ ಹಾಳಾಗದೇ? ಕುಟುಂಬದ ಮರ್ಯಾದೆ ಹರಾಜಾಗದೇ ಎಂಬ ಕಟುಸತ್ಯ, ಇಬ್ಬರಿಗೂ ಅರಿವಾಗುತ್ತಿದ್ದಂತೆ, ಇಬ್ಬರಿಗೂ ಪಶ್ಚಾತ್ತಾಪದ ಅರಿವಾಗಿ, ಕುಟುಂಬದ ಉಳಿವಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ, ಇಬ್ಬರೂ ಸೋಲನ್ನು ಒಪ್ಪಿಕೊಳ್ಳಲು ತಯಾರಾದರು. ಹಾಗಾಗಿ ಸಂಸಾರ ಉಳಿಯಿತು.
ತಾತ್ಪರ್ಯ ಇಷ್ಟೆ: ಸಂಸಾರದಲ್ಲಿ ಯಾರು ಸರಿ ಯಾರು ತಪ್ಪು ಎನ್ನುವುದು ಮುಖ್ಯವಲ್ಲ; ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ. ಸೋಲನ್ನು ಸೋಲೆಂದು ತಿಳಿಯದೇ ಒಬ್ಬರು ಸೋಲುವುದೇ ಸುಖೀ ಸಂಸಾರದ ಗುಟ್ಟು. ತನ್ನದೇ ಸರಿ, ತಾನೇ ಸರಿ ಎಂಬುದನ್ನು ರುಜುವಾತು ಗೊಳಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುವುದು ಸಂಬಂಧಗಳನ್ನು ಇನ್ನಷ್ಟು ಕೆಡಿಸುತ್ತದೆ. ಹಾಗೂ ಕೌಟುಂಬಿಕ ಶಾಂತಿಯನ್ನೇ ನಾಶ ಮಾಡುತ್ತದೆ. ಸಂಸಾರದಲ್ಲಿ ವಾದ ಮಾಡಿ ಗೆಲ್ಲುವುದು ನಿಜವಾದ ಗೆಲುವಲ್ಲ; ವಾದಗಳನ್ನು ತಡೆ ಹಿಡಿಯುವುದೇ ನಿಜವಾದ ಗೆಲುವು. ಇಲ್ಲವಾದರೆ, ಬಂಧುತ್ವವನ್ನೇ ಕಳೆದುಕೊಳ್ಳಬೇಕಾದೀತು. ವಾದದಿಂದ ಇತರರನ್ನು ಒಪ್ಪಿಸುತ್ತೇವೆ; ಮೆಚ್ಚಿಸುತ್ತೇವೆ; ಗೆಲ್ಲುತ್ತೇವೆ-ಎನ್ನುವ ಧೋರಣೆಗಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ. ಒಂದು ವೇಳೆ ವಾದದಲ್ಲಿ ಗೆಲುವು ನಮ್ಮದೇ ಆದರೂ, ಮಧುರ ಸಂಬಂಧದಲ್ಲಿ ಸೋಲು ನಮಗೆ ಕಟ್ಟಿಟ್ಟ ಬುತ್ತಿ.
ಹಾಗೆಂದು ಯಾವುದೇ ವಿಷಯದ ಬಗ್ಗೆ ಚರ್ಚೆಗಳು ನಡೆಯಲೇಬಾರದೆಂದಲ್ಲ. ಆದರೆ ಅದೆಲ್ಲವೂ ಆರೋಗ್ಯಕರ ಚರ್ಚೆಗಳಾಗಲಿ; ವಸ್ತುನಿಷ್ಠವಾಗಿರಲಿ. ಚರ್ಚೆಗಳನ್ನು ಗೆದ್ದು ಸಂಬಂಧಗಳನ್ನು ಕಳೆದುಕೊಳ್ಳುವುದಕ್ಕಿಂತ, ಅಹಿತಕರ ಚರ್ಚೆಗಳನ್ನು ತಪ್ಪಿಸಿ, ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಜಾಣತನವಾದೀತು. ಒಂದು ವೇಳೆ ನಾವೇ ಸರಿ ಆಗಿದ್ದರೂ, ಸಂಸಾರವನ್ನು ಉಳಿಸುವ ದೃಷ್ಟಿಯಿಂದ ಈ ಸೋತು ಗೆಲ್ಲುವ ಸೂತ್ರ ಎಂದಿಗೂ ಕ್ಷೇಮ. ಈ ಸತ್ಯವನ್ನೇ ಸಾಬೀತುಪಡಿಸಲು ‘ಸಾಗರ ದಾಟಲು ತೆಪ್ಪ ಬೇಕು. ಆದರೆ ಸಂಸಾರವೆಂಬ ಸಾಗರ ದಾಟಲು ಒಬ್ಬರು ತೆಪ್ಪಗಿರಬೇಕು’ ಎಂದು ಹೇಳಲಾಗಿದೆ. ಆದುದರಿಂದ, ಗಂಡ-ಹೆಂಡತಿ, ಅತ್ತೆ-ಸೊಸೆ, ಅಣ್ಣ-ತಮ್ಮಂದಿರು, ಹೆತ್ತವರು ಮತ್ತು ಮಕ್ಕಳ ನಡುವೆಯೂ ಈ ಹೊಂದಾಣಿಕೆ ಅತೀ ಅವಶ್ಯ. ಒಟ್ಟಿನಲ್ಲಿ ಸಂಸಾರದಲ್ಲಿ ಗೆದ್ದು ಬೀಗಿದ ಗೆಲುವು ಗೆಲವೇ ಅಲ್ಲ; ಸೋತು ಸೊರಗಿದ ಸೋಲೂ ಸೋಲೇ ಅಲ್ಲ; ಸಾಂಸಾರಿಕ ಸಂಬಂಧಗಳೆಂದರೆ, ತಾಳ್ಮೆ ತ್ಯಾಗಗಳ ಪ್ರತಿರೂಪ.