ಹೆಂಡ್ತಿ ಹುಡುಕಿಕೊಡಿ ಸಾರ್... ಎರಡೂವರೆ ಲಕ್ಷ ಹಣ ಎಲ್ಲೋಯ್ತು ಅಂತಾನೂ ಗೊತ್ತಿಲ್ಲ, ತರಕಾರಿ ತರಲು ಹೋದ ಪತ್ನಿಯೂ ನಾಪತ್ತೆ!

husband wife
Published on

ಶಿವಮೊಗ್ಗ: ಎರಡೂವರೆ ಲಕ್ಷ ರೂ. ಎಲ್ಲಿ ಹೋಯ್ತು ಎಂಬುದೂ ಗೊತ್ತಿಲ್ಲ... ತರಕಾರಿ ತರುತ್ತೇನೆ ಎಂದು ಹೋದ ಪತ್ನಿಯೂ ನಾಪತ್ತೆಯಾಗಿದ್ದಾಳೆ. ಅವಳಿಗಾಗಿ ನಾಲ್ಕು ದಿನ ದಾರಿಯಲ್ಲೇ ಕಾದರೂ ಆಕೆ ಬರ್ಲಿಲ್ಲ... ಪ್ಲೀಸ್​ ಸರ್​ ನನ್ನ ಹೆಂಡ್ತಿಯನ್ನ ಹುಡುಕಿಕೊಡಿ... ಎಂದು ವ್ಯಕ್ತಿಯೊಬ್ಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಇಂತಹ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ಶಿವಮೊಗ್ಗ ತಾಲೂಕು ಕಡೇಕಲ್‌ನ ಕೋಳಿ ವ್ಯಾಪಾರಿ ಲಷ್ಕರ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೊಹಲ್ಲಾದ ಕೋಳಿ ಫಾರ್ಮ್ ಮಾಲೀಕರೊಂದಿಗೆ ಲಷ್ಕರ್​ ವ್ಯವಹರಿಸುತ್ತಿದ್ದ. ಕೋಳಿ ಖರೀದಿ ಸಂಬಂಧ ಪಾರಂ ಮಾಲೀಕರಿಗೆ ಹಣ ನೀಡಲು ಪತ್ನಿಯೊಂದಿಗೆ ಮೊಹಲ್ಲಾಗೆ ಲಷ್ಕರ್ ಆಗಮಿಸಿದ್ದ. ಆ ವೇಳೆ ಮನೆಗೆ ತರಕಾರಿ ಬೇಕು. ಖರೀದಿ ಮಾಡಿಕೊಂಡು ಬರತ್ತೇನೆ. ಕೋಳಿ ಫಾರ್ಮ್​ ಮಾಲೀಕರಿಗೆ ಹಣ ತಲುಪಿಸಿ ಬನ್ನಿ ಎಂದು ಗಂಡನಿಗೆ ಹೇಳಿ ಪತ್ನಿ ಹೊರಟಿದ್ದಾಳೆ. ಲಷ್ಕರ್​ ತಂದ ಬ್ಯಾಗ್​ನಲ್ಲಿ ಆರು ಲಕ್ಷ ರೂ. ಇರಬೇಕಿತ್ತು. ಆದರೆ. ಬ್ಯಾಗ್ ತೆರೆದಾಗ ಅದರಲ್ಲಿ ಇದ್ದದ್ದು ಮೂರೂವರೆ ಲಕ್ಷ ರೂ. ಮಾತ್ರ! ಇನ್ನೂ ಎರಡೂವರೆ ಲಕ್ಷ ಹಣ ಎಲ್ಲಿ ಹೋಯ್ತು? ಎಂದು ತಿಳಿಯದೆ ಕಂಗಾಲದ ಲಷ್ಕರ್​, ಪತ್ನಿಗೆ ಕರೆ ಮಾಡಿದ್ದಾನೆ. ಹೌದಾ? ಹಾಗಾದ್ರೆ ಹಣ ಕಳೆದು ಹೋಗಿರಬೇಕು. ಹುಡುಕಿಕೊಂಡು ಬರುತ್ತೇನೆ ಎಂದು ಕರೆ ಸ್ಥಗಿತಗೊಳಿಸಿದ ಪತ್ನಿ, ಐದು ದಿನ ಕಳೆದರೂ ವಾಪಸ್ ಬಂದಿಲ್ಲ.

ನಾಲ್ಕು ದಿನಗಳಿಂದ ಹೆಂಡತಿ ಮರಳಿ ಬರುತ್ತಾಳೆ ಎಂದು ಅವಳ ದಾರಿ ಕಾದು ಕಾದು ಸುಸ್ತಾದ ಆತ ಪತಿರಾಯ, ಈಗ ಪತ್ನಿಯ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಕಳೆದು ಹೋಗಿರುವ ದುಡ್ಡನ್ನು ಹುಡುಕಿಕೊಂಡು ಬರುತ್ತೇನೆ ಎಂದು ಪತಿಗೆ ಹೇಳಿ ಹೋದ ಪತ್ನಿ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಪತ್ನಿಯೇ ಹಣ ತೆಗೆದುಕೊಂಡು ಹೋಗಿರಬಹುದು ಎಂಬ ಅನುಮಾನ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net