

ಭದ್ರಾವತಿ: ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ 2ನೇ ಗಂಡನ ವಿರುದ್ಧ ಮಹಿಳೆಯೊಬ್ಬರು ಕಾಗದನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂತ್ರಸ್ತ ಮಹಿಳೆ 6 ವರ್ಷದ ಹಿಂದೆ ಮೊದಲು ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರನ್ನ ಮದುವೆ ಆಗಿದ್ದರು. ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಕೌಟುಂಬಿಕ ಕಲಹದಿಂದ ಮೊದಲ ಪತಿಯಿಂದ ವಿಚ್ಛೇದನ ಪಡೆದ ಮಹಿಳೆ, ಮಗನ ಜತೆ ಭದ್ರಾವತಿ ನಗರದ ಉಜ್ಜನೀಪುರದಲ್ಲಿ ನೆಲೆಸಿದ್ದರು. ಅದೇ ಬಡಾವಣೆಯಲ್ಲಿ ಈಕೆಗೆ ಮಹಿಳೆಯೊಬ್ಬರ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದ ನಂತರ ವಿಚ್ಛೇದಿತೆಯನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವನ್ನು ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡುತ್ತಿದ್ದ ಮಹಿಳೆಯ ಮಗನಿಗೆ ವಿಚ್ಛೇದಿತೆ ಹೇಳಿಕೊಂಡಿದ್ದಳು. ವಿಚ್ಛೇದಿತೆಯ ಮಾತು ಕೇಳಿದ ಆತ, ನಾನೇ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ.
ಅದರಂತೆ ವಿಚ್ಛೇದಿತೆಯನ್ನು ಹೊಳಲೂರಿನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ 10 ದಿನ ಒಟ್ಟಿಗೆ ತಂಗಿದ್ದ. ಅಲ್ಲಿಂದ ಬಂದು ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ವಿಚ್ಛೇದಿತ ಮಹಿಳೆ ಜತೆ ತನ್ನ ಮಗ ಇರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಾಯಿ ಗಾಲಾಟೆ ಮಾಡಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕ ಈ ಜೋಡಿ ಬೆಂಗಳೂರಿಗೆ ತೆರಳಿ ವಿವಾಹವಾಗಿತ್ತು. ನಂತರ ಭದ್ರಾವತಿಗೆ ಆಗಮಿಸಿ ಉಜ್ಜನೀಪುರದಲ್ಲಿ ನೆಲೆಸಿದ್ದರು.
ಇತ್ತೀಚೆಗೆ ವಿನಾಕಾರಣ ದಂಪತಿ ನಡುವೆ ಜಗಳ ಆಗಿದ್ದು, 2ನೇ ಗಂಡನ ಕಿರುಕುಳಕ್ಕೆ ಬೇಸತ್ತು ದೂರು ಕೊಡುವುದಾಗಿ ಪತ್ನಿ ಹೇಳಿದ್ದಾಳೆ. ಆ ವೇಳೆ ಪತ್ನಿಯ ನಗ್ನ ಫೋಟೋಗಳನ್ನು ತೋರಿಸಿದ ಗಂಡ, ನನ್ನ ವಿರುದ್ಧ ದೂರು ಕೊಟ್ಟರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.
ಮದುವೆಯಾಗುವ ಮುನ್ನ ವಸತಿಗೃಹದಲ್ಲಿ ತಂಗಿದ್ದಾಗ ಮಹಿಳೆ ಸ್ನಾನ ಮಾಡುವ ವೇಳೆ ಆಕೆಗೆ ಗೊತ್ತಿಲ್ಲದಂತೆ ಆರೋಪಿ ಫೋಟೋಗಳನ್ನು ತೆಗೆದುಕೊಂಡಿದ್ದನಂತೆ. ಈ ವಿಚಾರ ಆಕೆಗೆ ಗೊತ್ತಿರಲಿಲ್ಲವಂತೆ. ಮದುವೆ ಬಳಿಕ ಗಂಡನ ಕಿರುಕುಳ ಪ್ರಶ್ನಿಸಿ ದೂರು ನೀಡುತ್ತೇನೆ ಎಂದಾಗ, ತನ್ನ ಬಳಿ ಇರುವ ನಗ್ನ ಫೋಟೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.