

ಬೆಂಗಳೂರು: ಎರಡು ಮಕ್ಕಳ ತಾಯಿ, ವಿಚ್ಛೇದಿತ ಮಹಿಳೆಯೊಬ್ಬರಿಗೆ ಬಾಳು ಕೊಡ್ತೀನೆಂದು ಪುಸಲಾಯಿಸಿದ ಸಹದ್ಯೋಗಿ, ಮದುವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಮಾಡಬಾರದ್ದು ಮಾಡಿದ್ದಾನೆ. ದಿಕ್ಕು ತೋಚದ ಮಹಿಳೆ, ನ್ಯಾಯಕ್ಕಾಗಿ ಇಂದಿರಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇಂದಿರಾನಗರದ ನಿವಾಸಿ 28 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಸಾಕಿಬ್ ಅಹಮ್ಮದ್ ಖುರೇಶಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರ ಮಹಿಳೆ ಕೌಟುಂಬಿಕ ಕಲಹದಿಂದ ಮೊದಲನೇ ಪತಿಗೆ ವಿಚ್ಛೇದನ ನೀಡಿ ಇಬ್ಬರು ಮಕ್ಕಳ ಜತೆಗೆ ಒಂಟಿಯಾಗಿ ವಾಸಿಸುತ್ತಿದ್ದಳು. ಜೀವನ ನಿರ್ವಹಣೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಖುರೇಶಿ ಈಕೆಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಸುವ ನಾಟಕವಾಡಿ ವಿವಾಹವಾಗುವುದಾಗಿ ನಂಬಿಸಿದ್ದ. ನಂತರ ಸಂತ್ರಸ್ತೆಯನ್ನು ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.
2020ರ ಡಿ.10ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆರೋಪಿಯನ್ನು ವಿವಾಹವಾಗಲು ಮಹಿಳೆ ಸಿದ್ಧತೆ ನಡೆಸುತ್ತಿದ್ದಾಗ ಕೊನೇ ಕ್ಷಣದಲ್ಲಿ ಆರೋಪಿ ಸಬೂಬು ಹೇಳಿ ವಿವಾಹ ದಿನಾಂಕ ಮುಂದೂಡಿದ್ದ. ನಂತರ ಮತ್ತೆ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಹೊಂದಿದ್ದ. ಮಹಿಳೆ ಈ ವಿಚಾರವನ್ನು ಪಾಲಕರ ಗಮನಕ್ಕೆ ತಂದಿದ್ದಳು. ಅವರು ಆತನಿಗೆ ಕೊಟ್ಟು ಮದುವೆ ಮಾಡಲು ಒಪ್ಪಿಗೆ ಸೂಚಿಸಿದ್ದರು. ಸಂತ್ರಸ್ತೆಯ ಪಾಲಕರು ಕುರೇಶಿ ಜತೆಗೆ ಚರ್ಚಿಸಿ ಫೆ.24ರಂದು ವಿವಾಹ ಸಮಾರಂಭದ ದಿನಾಂಕ ನಿಗದಿಪಡಿಸಿದ್ದರು. ಈ ನಡುವೆ ವಿವಾಹದ ಸಿದ್ಧತೆಯಲ್ಲಿದ್ದ ಸಂತ್ರಸ್ತೆಯನ್ನು ಭೇಟಿಯಾದ ಕುರೇಶಿ, ನಾನು ನಿನ್ನನ್ನು ವಿವಾಹವಾಗುವುದಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಂಚಿಸಿದ್ದಾನೆ. ವಂಚನೆಗೊಳಗಾದ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.