ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ...

dating love
Published on

​ಬೆಂಗಳೂರು: ಪತ್ನಿ, ಇಬ್ಬರು ಮುದ್ದಾದ ಮಕ್ಕಳಿದ್ದರೂ ಈತನಿಗೆ ಅವಿವಾಹಿತ ಮಹಿಳೆಯರ ಜತೆ ಡೇಟಿಂಗ್​ ಮಾಡುವ ಚಟ. ಡೇಟಿಂಗ್​ ಅನ್ನೇ ಬಂಡವಾಳ ಮಾಡಿಕೊಂಡ ಈತ ಮಹಿಳೆಯರನ್ನ ಪುಸಲಾಯಿಸಿ ಅವರ ಮನೆಗೇ ತೆರಳುತ್ತಿದ್ದ... ಮಹಿಳೆಯರ ವಿವಸ್ತ್ರಗೊಳಿಸಿ ಮೊಬೈಲ್​ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದು ವರಸೆ ಬದಲಿಸುತ್ತಿದ್ದ...

ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರು ಕೊಟ್ಟ ದೂರಿನ ಮೇರೆಗೆ ಛತ್ತೀಸ್​ಗಢ ಮೂಲದ ಅಭಿಷೇಕ್​ (33) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಪ್ಟ್​ವೇರ್​ ಉದ್ಯೋಗಿಯಾಗಿರುವ ಅಭಿಷೇಕ್​, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಎಚ್​ಎಸ್​ಆರ್​ ಲೇಔಟ್​ನಲ್ಲಿ ನೆಲೆಸಿದ್ದ.

ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡೇಟಿಂಗ್​ ಆ್ಯಪ್​ನಲ್ಲಿ ಅವಿವಾಹಿತ ಮಹಿಳೆಯರನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಡೇಟಿಂಗ್​ ನೆಪದಲ್ಲಿ ಮನೆಗೆ ತೆರಳಿ ವಿವಸ್ತ್ರಗೊಳಿಸಿ ಫೋಟೋ ತೆಗೆದುಕೊಳ್ಳುತ್ತಿದ್ದ. ಆನಂತರ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ. ಇದೇ ರೀತಿ ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರನ್ನು ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯಿಸಿಕೊಂಡು ಅವರ ಮೊಬೈಲ್​ ನಂಬರ್​ ಪಡೆದಿದ್ದ. ಕರೆ ಮತ್ತು ಮೆಸೇಜ್​ ಮಾಡಿ ಪುಸಲಾಯಿಸಿ ಫೆ.1ರಂದು ಆ ಮಹಿಳೆಯ ಮನೆಗೆ ತೆರಳಿದ್ದ. ಅಲ್ಲಿ ಆಕೆಯ ವಿವಸ್ತ್ರಗೊಳಿಸಿ ಮೊಬೈಲ್​ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದ್ದ.

ಮನೆಯಿಂದ ಹೊರ ಬಂದಾತ ಆ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಲ್ಲಿ ಅಶ್ಲೀಲ ಫೋಟೋಗಳನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಂತ್ರಸ್ತೆ ದೂರು ನೀಡಿದ ಮೂರು ತಾಸಿನೊಳಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net