

ಮಂಗಳೂರು: ಬ್ರೇಕ್ ಪೆಡಲ್ಗೆ ನೀರಿನ ಬಾಟಲಿ ಸಿಕ್ಕಿಕೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಯದ್ವಾತದ್ವಾ ಚಲಿಸಿ ದ್ವಿಚಕ್ರ ವಾಹನ ಮತ್ತು 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಈ ಘಟನೆ ಮಂಗಳೂರು ನಗರದ ಉರ್ವಾದ ಚಿಲಿಂಬಿ-ಕೋಟೆಕಣಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ವಿವೇಕಾನಂದ ಶೆಣೈ ಎಂಬುವವರು ಕೋಟೆಕಣಿಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಾರಿನಲ್ಲಿದ್ದ ವಾಟರ್ ಬಾಟಲಿ ಕಾರಿನ ಬ್ರೇಕ್ ಪೆಡಲ್ ಅಡಿ ಸಿಲುಕಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಯರ್ರಾಬಿರ್ರಿ ಚಲಿಸಿದೆ. ಪರಿಣಾಮ 2 ದ್ವಿಚಕ್ರ ವಾಹನ ಹಾಗೂ 2 ಕಾರುಗಳಿಗೆ ಡಿಕ್ಕಿ ಹೊಡೆದು ನಿಂತಿದೆ.
ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 2 ಕಾರು ಮತ್ತು 2 ದ್ಬಿಚಕ್ರ ವಾಹನ ಜಖಂ ಆಗಿವೆ.
ಕಾರು ಚಾಲಕ ವಿವೇಕಾನಂದ ಶೆಣೈ ವಿರುದ್ಧ ಬಂದರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.