

ಬೆಳಗಾವಿ: ಶಾಲಾ-ಕಾಲೇಜುಗಳಲ್ಲಿ ಶಿಕ್ಷಣಕ್ಕಿಂತಲೂ ಹಿಜಾಬ್ ಮುಖ್ಯ ಅನ್ನುವವರು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದರು.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್, ಕಾಲೇಜುಗಳಲ್ಲಿ ಶೈಕ್ಷಣಿಕ ಶಿಸ್ತಿಗಿಂತ ಇಸ್ಲಾಂ ಸಂಸ್ಕೃತಿಯೇ ಪ್ರಮುಖ ಎನ್ನುವವರು ಅಫ್ಘಾನಿಸ್ತಾನ ಹೋಗಲಿ. ಹಿಜಾಬ್, ಬುರ್ಕಾ ಧರಿಸುತ್ತೇವೆ, ಅಲ್ಲಿಯೇ ನಮಾಜ್ ಕೂಡ ಮಾಡುತ್ತೇವೆ ಎನ್ನುವ ಮಟ್ಟಿಗೆ ಸರ್ಕಾರ ಸಡಿಲಿಕೆ ಕೊಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿಯೇ ಹಿಜಾಬ್ಧಾರಿ ವಿದ್ಯಾರ್ಥಿನಿಯನ್ನು ಕಾಲೇಜ್ಗಳಲ್ಲಿ ಅಮಾನತು ಮಾಡಿದ್ದರೆ, ಈ ವಿಚಾರ ರಾಜ್ಯವ್ಯಾಪಿ ವಿಸ್ತರಿಸುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಹಿಜಾಬ್ ಬೇಕೆಂದು ಹಠ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.