ಸುಣ್ಣ-ಬಣ್ಣ ಕಾಣದ ಕಟ್ಟಡ

nrp gurubhavana
ಎನ್.ಆರ್.ಪುರದಲ್ಲಿ ದುರಸ್ತಿ ಕಾಣದೆ ಹಾಳು ಬಿದ್ದಿರುವ ಗುರುಭವನ.
Published on

ಎನ್.ಆರ್.ಪುರ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಾಗದಲ್ಲಿ ಶಿಕ್ಷಕರ ಸಂಘಕ್ಕೆ ಆದಾಯ ಬರುವ ಹಾಗೂ ಶಿಕ್ಷಕರು ಸಭೆ, ಸಮಾರಂಭ ನಡೆಸಲಿ ಎಂಬ ಉದ್ದೇಶದಿಂದ ಪಟ್ಟಣದಲ್ಲಿ ಗುರುಭವನ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿಪೀಠ ಸೇರಿ ಅನೇಕ ಮಠಗಳು, ದಾನಿಗಳು ದೇಣಿಗೆಯನ್ನೂ ನೀಡಿದ್ದಾರೆ. ಆದರೆ ಪಟ್ಟಣದ ಹೌಸಿಂಗ್ ಬೋರ್ಡ್ ರಸ್ತೆಯಲ್ಲಿರುವ ಗುರುಭವನ ದುರಸ್ತಿ ಕಾಣದೆ ಸೊರಗಿದೆ.

1998ರಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್.ಜಿ.ಗೋವಿಂದೇಗೌಡರು ಗುರುಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 2001ರಲ್ಲಿ ಕಾನೂನು ಮತ್ತು ವ್ಯವಹಾರಗಳ ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡರು ಕಟ್ಟಡ ಉದ್ಘಾಟನೆ ಮಾಡಿದ್ದರು. ನಿರ್ಮಾಣವಾದ ವರ್ಷದಿಂದಲೂ ಸುಣ-ಬಣ್ಣ ಕಾಣದಿರುವುದು ಬೇಸರದ ಸಂಗತಿ. ಇಲ್ಲಿ ಹಲವು ಶುಭ ಸಮಾರಂಭಗಳು, ತರಬೇತಿ ಕಾರ್ಯಕ್ರಮ, ವಿವಾಹ ಮಹೋತ್ಸವಗಳು ನಡೆಯುತ್ತಿದ್ದು ಇದರಿಂದ ಬಾಡಿಗೆ ಬರುತ್ತದೆ. ಅಲ್ಲದೆ ಇಲ್ಲಿ ನಾಲ್ಕೈದು ಕೊಠಡಿಗಳಿದ್ದು ಇದರಿಂದಲೂ ಕೂಡ ಬಾಡಿಗೆ ಬರುತ್ತದೆ. ಆದರೂ ನಿರ್ಲಕ್ಷೃ ತೋರಲಾಗುತ್ತಿದೆ.
ಶೌಚಗೃಹ ನಿರ್ವಹಣೆ ಕೊರತೆ: ಮಹಿಳೆಯರ ಹಾಗೂ ಪುರುಷರ ಶೌಚಗೃಹಗಳು ಬಳಕೆಗೆ ಯೋಗ್ಯ ಇಲ್ಲದಂತಾಗಿದೆ. ನಿರ್ವಹಣೆ ಇಲ್ಲದೆ ದುರ್ವಾಸನೆ ಬರುತ್ತ್ತಿದೆ. ಬಾಗಿಲುಗಳಿಗೆ ಚಿಲಕವೇ ಇಲ್ಲ. ಇನ್ನು ಗುರುಭವನದ ಎದುರು ವಾಹನಗಳ ಪಾರ್ಕಿಂಗ್‌ಗೂ ಅನುಕೂಲವಿದೆ. ಇಲ್ಲಿ ಸಭೆ, ಸಮಾರಂಭ ನಡೆಸಲು ಉತ್ತಮ ಸ್ಥಳವಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಸಭೆ ಸಮಾರಂಭಗಳ ನಡೆಯುವ ಪ್ರಮಾಣ ಕಡಿಮೆಯಾಗಿದೆ. ದುರಸ್ತಿ ಮಾಡಿಸಿ ಸುಣ್ಣ-ಬಣ್ಣ ಬಳಿಸಿ ಅಗತ್ಯ ಸೌಕರ್ಯ ಒದಗಿಸಿದಲ್ಲಿ ಶಿಕ್ಷಕರ ಸಂಘಕ್ಕೆ ಆದಾಯ ಬರುತ್ತದೆ. ಗುರುಭವನದ ಮುಖ್ಯ ವೇದಿಕೆಯ ಅಕ್ಕಪಕ್ಕದ ಕೊಠಡಿಗಳು ಮಳೆಗಾಲದಲ್ಲಿ ಈಜುಕೊಳದಂತಾಗುತ್ತವೆ. ಶೀಟ್‌ಗಳನ್ನು ದುರಸ್ತಿ ಮಾಡದಿರುವುದು ಶಿಕ್ಷಣ ಇಲಾಖೆ ನಿರ್ಲಕ್ಷೃಕ್ಕೆ ಸಾಕ್ಷಿ. ಜನಪ್ರತಿನಿಧಿಗಳು ಗುರುಭವನ ದುರಸ್ತಿಗೆ ಅನುದಾನ ಮೀಸಲಿಡಬೇಕಿದೆ.
ಊಟದ ಹಾಲ್ ಇಲ್ಲ: ಗುರುಭವನದಲ್ಲಿ ಊಟದ ಹಾಲ್ ಇಲ್ಲ. ಸಭೆ, ಸಮಾರಂಭ ಆದಾಗ ಪಕ್ಕದಲ್ಲಿ ಶಾಮಿಯಾನ ಹಾಕಬೇಕಾಗಿದೆ. ಇದರಿಂದ ಸಭೆ ಸಮಾರಂಭ ನಡೆಸುವವರಿಗೆ ಆರ್ಥಿಕ ಹೊರೆ ಬೀಳುತ್ತಿದೆ. ಹಾಗಾಗಿ ಖಾಸಗಿ ಸಮುದಾಯ ಭವನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಡುಗೆ ತಯಾರಿಸಲು ಅಡುಗೆ ಕೋಣೆಗಳಿಲ್ಲ. ಹೀಗಾಗಿ ಅಡುಗೆ ಮಾಡಲೂ ಸಹ ಪ್ರತ್ಯೇಕ ಶಾಮಿಯಾನ ಹಾಕಿಕೊಳ್ಳಬೇಕು.
ಸೂಕ್ತ ಭದ್ರತೆ ಇಲ್ಲ: ಗುರುಭವನ ನಿರ್ಮಾಣಕ್ಕೆ ಜಾಗ ಮಂಜೂರಾದರೂ ಜಾಗದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಕೆಲವು ವ್ಯಕ್ತಿಗಳು ಗುರುಭವನದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಲಾಗಿತ್ತು. ನ್ಯಾಯಾಲಯದಲ್ಲಿ ಜಾಗದ ಬಗ್ಗೆ ಗುರುಭವನ ಕಡೆಗೇ ತೀರ್ಪು ಬಂದಿದೆ. ಆದರೂ ತಮ್ಮ ಜಾಗಕ್ಕೆ ಬೇಲಿ ಹಾಕಿ ಭದ್ರತೆ ಮಾಡಿಕೊಂಡಿಲ್ಲ.
ಗುರು ಭವನ ದುರಸ್ತಿ ಕಾರ್ಯಕ್ಕೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಪೂರಕ ಸ್ಪಂದನೆ ಸಿಕ್ಕಿದೆ. ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಗುರುಭವನಕ್ಕೆ ಅಡುಗೆ ಕೊಠಡಿ ಹಾಗೂ ಊಟದ ಹಾಲ್ ಅವಶ್ಯವಿದೆ. ಗುರುಭವನ ಸುಣ್ಣ-ಬಣ್ಣ ಕಾರ್ಯಕ್ಕೆ ಬಿಇಒ ಅವರೊಂದಿಗೆ ಚರ್ಚಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಉಳಿದ ದುರಸ್ತಿ ಕಾರ್ಯ ಮಾಡಿಸಲಾಗುವುದು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net