

Water Tank Falls On Women: ಅದೃಷ್ಟ ಚೆನ್ನಾಗಿದ್ದರೆ ಸಾವನ್ನು ಕೂಡ ಗೆಲ್ಲಬಹುದು ಅನ್ನೋ ಮಾತಿದೆ. ಎಂಥದ್ದೇ ದೊಡ್ಡ ಅಪಾಯದಿಂದಲೂ ಪಾರಾಗಬಹುದು. ಇಲ್ಲೊಬ್ಬ ಮಹಿಳೆಯ ವಿಚಾರದಲ್ಲೂ ನಡೆದಿದ್ದು ಅದೇ. ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಹಿಳೆ ( Woman ) ಯ ಮೇಲೆ ಒಂದು ದೊಡ್ಡ ನೀರಿನ ಟ್ಯಾಂಕ್ ( Water Tank ) ಬೀಳುತ್ತಿದೆ. ಆದರೆ, ಅದೃಷ್ಟವಶಾತ್ ಆಕೆಗೆ ಯಾವುದೇ ಹಾನಿಯಾಗಿಲ್ಲ. ಇಷ್ಟು ದೊಡ್ಡ ಟ್ಯಾಂಕ್ ಬಿದ್ದರೂ ಮಹಿಳೆಯ ಮೈಮೇಲೆ ಒಂದು ಸಣ್ಣ ಗೀರು ಕೂಡ ಬೀಳದಿರುವುದು ಗಮನಾರ್ಹ. ಅಂದಹಾಗೆ ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದಿದೆ.
ಮಹಿಳೆಯೊಬ್ಬಳು ತನ್ನ ಮನೆಯ ಮುಂದೆ ಇನ್ನೊಬ್ಬ ಮಹಿಳೆಯೊಂದಿಗೆ ಮಾತನಾಡಿದ ಬಳಿಕ ತನ್ನ ಮನೆಗೆ ಹಿಂದಿರುಗುತ್ತಾಳೆ. ಈ ವೇಳೆ ಆಕೆ ಸೇಬನ್ನು ತಿನ್ನುತ್ತಾ ತನ್ನ ಮನೆಯತ್ತ ಹೆಜ್ಜೆ ಹಾಕಿದಾಗ ಏಕಾಏಕಿ ಬೃಹತ್ ನೀರಿನ ಟ್ಯಾಂಕ್ ಆಕೆಯ ಮೇಲೆ ರಪ್ ಅಂತ ಬೀಳುತ್ತದೆ. ಮನುಷ್ಯ ಎತ್ತರದ ಟ್ಯಾಂಕ್ ಒಳಗೆ ಆ ಮಹಿಳೆ ಸಿಲುಕಿಕೊಳ್ಳುತ್ತಾಳೆ. ಆದರೆ, ಟ್ಯಾಂಕ್ನ ಕೆಳಭಾಗದಲ್ಲಿ ರಂಧ್ರವಿದ್ದ ಕಾರಣ ಆ ಮಹಿಳೆ ಪವಾಡವೆಂಬಂತೆ ಬದುಕುಳಿಯುತ್ತಾಳೆ. ಟ್ಯಾಂಕರ್ನ ಕೆಳಭಾಗದಲ್ಲಿರುವ ರಂಧ್ರದ ಮಧ್ಯದಲ್ಲಿ ಆ ಮಹಿಳೆ ಸರಿಯಾಗಿ ಸಿಲುಕಿಕೊಳ್ಳುತ್ತಾಳೆ. ಇದರಿಂದ ಆ ಮಹಿಳೆಗೆ ಯಾವುದೇ ಗಾಯವಾಗಿಲ್ಲ. ಈ ಘಟನೆಯನ್ನು ನೋಡಿದ ಎರಡ್ಮೂರು ಜನರು ಮಹಿಳೆಯ ಬಳಿಗೆ ಓಡಿ ಬರುತ್ತಾರೆ. ನೀರಿನ ಟ್ಯಾಂಕರ್ ಮಾಲೀಕರ ವಿರುದ್ಧ ಅಸಮಾಧಾನ ಹೊರಹಾಕುತ್ತಾರೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.
ಸದ್ಯ 22 ಸೆಕೆಂಡ್ ಉದ್ದದ ವಿಡಿಯೋ ತುಣುಕನ್ನು ಹೇಮಂತ್ ಬಾತ್ರಾ ಹೆಸರಿನ ಎಕ್ಸ್ ಬಳಕೆದಾರ ಹಂಚಿಕೊಂಡಿದ್ದು, ಪ್ರತಿದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಲೈಕ್ಗಳು ಮತ್ತು ಕಾಮೆಂಟ್ಗಳ ಮಹಾಪೂರವೇ ಹರಿದು ಬರುತ್ತಿದೆ. ಈವರೆಗೂ ಈ ವಿಡಿಯೋವನ್ನು 5 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)