ಸಂಪಾದಕೀಯ | ರಾಜ್ಯಕ್ಕೆ ಎಚ್ಚರಿಕೆಯ ಗಂಟೆ

ವಿಜಯವಾಣಿ (3)
Published on

ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿನೆರಳು ಕಳೆದ ಕೆಲವು ವರ್ಷಗಳಿಂದ ಸದ್ದಿಲ್ಲದಂತೆ ಗಾಢವಾಗುತ್ತ ಸಾಗಿದೆ. 2022ರಿಂದ 2025ರ ಮೇ ತಿಂಗಳವರೆಗೆ ರಾಜ್ಯದಲ್ಲಿ 51 ಭಯೋತ್ಪಾದನೆ ಪ್ರಕರಣಗಳು ವರದಿಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. 2023ರಲ್ಲಿ ಒಂದೇ ವರ್ಷದಲ್ಲಿ 24 ಪ್ರಕರಣಗಳು ದಾಖಲಾಗಿರುವುದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಆತಂಕಕಾರಿ ವಿಷಯವೆಂದರೆ, ಕೇವಲ ಆರು ಪ್ರಕರಣಗಳಲ್ಲಿ ಶಂಕಿತ ಉಗ್ರರ ಬಂಧನವಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಬಹುತೇಕ ಪ್ರಕರಣಗಳು ತನಿಖಾ ಹಂತದಲ್ಲಿಯೇ ಉಳಿದಿವೆ. ಇದು ರಾಜ್ಯದ ಭದ್ರತಾ ವ್ಯವಸ್ಥೆಯ ದಕ್ಷತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಆಂತರಿಕ ಭದ್ರತೆಗೆ ಭಯೋತ್ಪಾದನೆ ದೀರ್ಘಕಾಲದಿಂದಲೂ ಬೆದರಿಕೆಯಾಗಿದೆ.

ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್​ಗಳ ಸ್ಥಾಪನೆಯ ವಿಚಾರ ಬಹಿರಂಗಗೊಂಡಿರುವುದು ಈ ಜಾಲದ ವ್ಯಾಪಕತೆ ಮತ್ತು ಯೋಜಿತ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಈ ಸ್ಲೀಪರ್ ಸೆಲ್​ಗಳು, ಯಾವುದೇ ಸಮಯದಲ್ಲಿ ಸಕ್ರಿಯಗೊಂಡು ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಆಂತರಿಕ ಭದ್ರತೆಗೆ ಗಂಭೀರ ಸವಾಲಾಗಿದೆ. ಕರ್ನಾಟಕದಲ್ಲಿ ಈ ಉಗ್ರಜಾಲವನ್ನು ಸದೆಬಡಿಯದಿದ್ದರೆ ಇದು ಶಾಂತಿಯುತ ವಾತಾವರಣಕ್ಕೆ ಮಾತ್ರವಲ್ಲ, ಆರ್ಥಿಕ ಮತ್ತು ಸಾಮಾಜಿಕ ಸ್ಥಿರತೆಗೂ ಧಕ್ಕೆಯನ್ನುಂಟು ಮಾಡುತ್ತದೆ. ರಾಜ್ಯವು ಐಟಿ, ಬಯೋಟೆಕ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜಾಗತಿಕ ಕೇಂದ್ರವಾಗಿದೆ. ಭಯೋತ್ಪಾದನೆ ಘಟನೆಗಳು ರಾಜ್ಯದ ಪ್ರಖ್ಯಾತಿಗೆ ಕಳಂಕ ಉಂಟುಮಾಡುವುದು ನಿಶ್ಚಿತ. ಜೊತೆಗೆ, ಭಯೋತ್ಪಾದಕ ಚಟುವಟಿಕೆಗಳಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ, ಸಾಮಾಜಿಕ ಸೌಹಾರ್ದತೆ ಅಪಾಯ ಉಂಟಾಗುತ್ತದೆ.

ಈ ಸವಾಲನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೊತೆಯಾಗಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮೊದಲಿಗೆ, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯ. ಸ್ಲೀಪರ್​ಸೆಲ್​ಗಳಂತಹ ಗುಪ್ತ ಜಾಲಗಳನ್ನು ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಹೆಚ್ಚಿಸಬೇಕು. ಎರಡನೆಯದಾಗಿ, ತನಿಖಾ ಸಂಸ್ಥೆಗಳಾದ ಎನ್​ಐಎ ಮತ್ತು ರಾಜ್ಯದ ಆಂತರಿಕ ಭದ್ರತಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು, ಇದರಿಂದ ಉಗ್ರರ ಬಂಧನದ ಪ್ರಮಾಣವನ್ನು ಜಾಸ್ತಿ ಮಾಡಬಹುದು. ಮೂರನೆಯದಾಗಿ, ಸಮುದಾಯ ಜಾಗೃತಿಯನ್ನು ಹೆಚ್ಚಿಸಬೇಕು. ಸಾಮಾನ್ಯ ಜನರೇ ಈ ಜಾಲದ ಬಗ್ಗೆ ಎಚ್ಚರಿಕೆಯ ಕಣ್ಣುಗಳಿಂದ ನಿಗಾ ವಹಿಸಿ, ನಿರ್ದಿಷ್ಟ ಪ್ರಕರಣಗಳು ಕಂಡುಬಂದರೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡುವಂತಾದರೆ ಇನ್ನೂ ಉತ್ತಮ. ಜೊತೆಗೆ, ಈ ಕೆಲಸಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಥವಾ ಭಿನ್ನಾಭಿಪ್ರಾಯ ಅಡ್ಡಿ ಉಂಟು ಮಾಡಬಾರದು.

ಭಯೋತ್ಪಾದನೆ ವಿರುದ್ಧದ ಹೋರಾಟವು ರಾಜಕೀಯ ಸೀಮೆಗಳನ್ನು ಮೀರಿ ಎಲ್ಲ ಪಕ್ಷಗಳ ಸಹಕಾರವನ್ನು ಒಳಗೊಂಡಿರಬೇಕು. ರಾಜ್ಯದ ಪೊಲೀಸ್ ಇಲಾಖೆ, ಗುಪ್ತಚರ ಏಜೆನ್ಸಿಗಳು ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳ ನಡುವೆ ಸಮನ್ವಯ ಬಲಪಡಿಸಬೇಕು. ಕರ್ನಾಟಕದಲ್ಲಿ ಭಯೋತ್ಪಾದನೆ ಪ್ರಕರಣಗಳು ಹೆಚ್ಚಾದರೆ ಅದು ಕೇವಲ ರಾಜ್ಯದ ಸಮಸ್ಯೆಯಾಗಿರುವುದಿಲ್ಲ, ಇಡೀ ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುತ್ತದೆ. ಉಗ್ರಜಾಲವನ್ನು ಮಟ್ಟಹಾಕದಿದ್ದರೆ, ಅದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net