

(3-29-50 ರಿಂದ 60)
ಲೀಲಾಮಹಾರಾಣಿ ಹೇಳಿದಳು - ‘ಅಹೋ ದೇವಿ! ನಾವಿಬ್ಬರೂ ಈಗ ತುಂಬಾ ದೂರದ ದಾರಿಯಲ್ಲಿ ಬರುತ್ತಿದ್ದೇವೆ. ಸೂರ್ಯನು ಪರಮಾಣುವಿನಷ್ಟು ಚಿಕ್ಕದಾಗಿಯೂ ಕೂಡ ಇಲ್ಲಿಂದ ಕಾಣುತ್ತಿಲ್ಲ. (ಅಥವಾ ಪರಮಾಣು ಹೇಗೆ ಕಣ್ಣಿಗೆ ಕಾಣುವುದಿಲ್ಲವೋ, ಹಾಗೆಯೇ ಸೂರ್ಯನೂ ಸ್ವಲ್ಪವೂ ಕಾಣಿಸುತ್ತಿಲ್ಲ.) ಹೇ ದೇವಿ! ಇಲ್ಲಿಂದ ಮುಂದೆ ಬಹುಶಃ ನಮ್ಮ ದಾರಿ ಬೇರೆಯಾಗುತ್ತದೆ. ಆ ದಾರಿ ಎಂತಹ ದಾರಿ ಮತ್ತು ಹೇಗೆ ಸಾಗಬೇಕಾಗಿದೆ ಎಂಬುದನ್ನು ನನಗೆ ತಿಳಿಸಿಕೊಡು’.
ಶ್ರೀದೇವಿಯು ಹೇಳಿದಳು - ‘ವತ್ಸೆ! ಇನ್ನು ಮೇಲೆ ನಿನ್ನ ಮುಂದೆ ಬ್ರಹ್ಮಾಂಡದ ಊರ್ಧ್ವಪಾತ್ರೆ (ಮೇಲ್ಭಾಗದಲ್ಲಿದ್ದು ಮುಚ್ಚಳಿಕೆ ಯಂತಿರುವ ಪಾತ್ರೆ) ಇರುತ್ತದೆ. ಚಂದ್ರಾದಿ ಗ್ರಹ-ನಕ್ಷತ್ರಗಳು ಧೂಳಿನ ಕಣಗಳಂತೆ ಈ ಊರ್ಧ್ವಪಾತ್ರೆಯಿಂದಲೇ ಹುಟ್ಟಿಕೊಂಡಿವೆ’. ಶ್ರೀ ವಸಿಷ್ಠರು ಆಖ್ಯಾನವನ್ನು ಮುಂದುವರಿಸಿದರು. ‘ಶ್ರೀರಾಮ! ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತ ಅವರಿಬ್ಬರೂ ಬ್ರಹ್ಮಾಂಡದ ಊರ್ಧ್ವಪಾತ್ರೆಯನ್ನು ಪ್ರವೇಶಿಸಿದರು. ಎರಡು ಭ್ರಮರಗಳಂತೆ ಪರ್ವತದ ಗಟ್ಟಿಯಾದ ಗೋಡೆಯಂತಿರುವ ಅದನ್ನು ಪ್ರವೇಶಿಸಿದರು. ಹಾಗಿ ದ್ದರೂ ಸ್ವಲ್ಪವೂ ಕ್ಲೇಶವಿಲ್ಲದೇ ಆಕಾಶದಿಂದ ಹೊರಬಂದಂತೆ ಅದರಿಂದ ಹೊರಬಂದರು. ಅಷ್ಟು ಗಟ್ಟಿಯಾದ ಊರ್ಧ್ವಪಾತ್ರೆಯನ್ನು ಅವರಿಗೆ ದಾಟಲು ಕಷ್ಟವಾಗಲಿಲ್ಲ. ಏಕೆಂದರೆ ಅವರಿಗೆ ಈ ಬ್ರಹ್ಮಾಂಡವು ಸ್ವಪ್ನದಂತೆ ತೋರಿಕೆ ಎಂಬುದುಚೆನ್ನಾಗಿ ಅರಿವಿಗೆ ಬಂದಿದೆ. ಯಾವುದು ಸತ್ಯ ಎಂಬು ದಾಗಿ ದೃಢವಾದ ಅರಿವು ಬಂದಿರುತ್ತದೆಯೋ, ಅದು ವಜ್ರದಂತೆ ಘಟ್ಟಿಯಾಗಿ ತೋರುತ್ತದೆ. ತೋರಿಕೆ ಎಂಬá-ದಾಗಿ ಅರಿವಿಗೆ ಬಂದರೆ ಅದು ಘಟ್ಟಿಯಾಗಿ ಗೋಚರಿಸುವುದಿಲ್ಲ’.
‘ಸಮಾಧಿಸ್ಥಿತಿಯ ಬಲದಿಂದ ಲೀಲಾಮಹಾರಾಣಿಗೆ ಅನಂತ ಪರಮಾತ್ಮನ ಅರಿವು ಹಿಂದೆ ಉಂಟಾಗಿದೆ. ಆ ಅರಿವಿಗೆ ಪರಿಮಿತಿ ಇಲ್ಲದ್ದರಿಂದ ಅಪರಿಮಿತ ಅರಿವಿನಿಂದಲೇ ಅವಳು ಬ್ರಹ್ಮಾಂಡದ ಆವರಣಗಳನ್ನು ನೋಡಿದಳು. ಸ್ಥೂಲ ಬ್ರಹ್ಮಾಂಡದ ಆಚೆ (ಹೊರಗೆ) ಇರುವ ಅತ್ಯಂತ ಸುಂದರವಾದ ಜಲಾದಿ ಆವರಣಗಳನ್ನು ಅವಳು ನೋಡಿದಳು. ಸ್ಥೂಲ ಬ್ರಹ್ಮಾಂಡಕ್ಕಿಂತ ಹತ್ತುಪಟ್ಟು ವಿಸ್ತಾರವಾಗಿರುವ ನೀರಿನ ಆವರಣ ಅವಳಿಗೆ ಗೋಚರಿಸಿತು. ಅಕ್ಕೋಟದ ಹಣ್ಣನ್ನು ಅದರ ಮೇಲ್ಭಾಗದಲ್ಲಿರುವ ಸಿಪ್ಪೆಯು ಆವರಿಸಿದಂತೆ ಆ ನೀರಿನ ಆವರಣವು ಸ್ಥೂಲ ಬ್ರಹ್ಮಾಂಡವನ್ನು ಆವರಿಸಿಕೊಂಡು ಇದೆ. ಅದರ ಹೊರಗೆ ಅದಕ್ಕಿಂತಲೂ ಹತ್ತುಪಟ್ಟು ವಿಸ್ತಾರವಾದ ತೇಜಸ್ಸಿನ ಆವರಣ, ಅದರ ಹೊರಗೆ ಅದಕ್ಕಿಂತ ಹತ್ತುಪಟ್ಟು ವಿಸ್ತಾರವಾದ ವಾಯá-ವಿನ ಆವರಣ ಮತ್ತು ಅದಕ್ಕಿಂತ ಹೊರಗೆ ಮತ್ತೂ ಹತ್ತುಪಟ್ಟು ವಿಸ್ತಾರವಾದ ಆಕಾಶದ ಆವರಣವಿದೆ’. ಆಕಾಶಮಂಡಲ್ಕತ ಆಚೆಗೆ ಶುದ್ಧವಾದ ಚೈತನ್ಯವೆಂಬ ಆಕಾಶವಿದೆ. ಅದು ಹಿಂದಿನ ಭೂತಾಕಾಶಕ್ಕಿಂತ ಶ್ರೇಷ್ಠವೆಂದು ಹೇಳಲ್ಪಟ್ಟಿದೆ’. (ಇವನ್ನೆಲ್ಲವನ್ನೂ ಅವಳು ತನ್ನ ಅಪರಿಮಿತ ಅರಿವಿನಿಂದ ನೋಡಿದಳು.
ಬ್ರಹ್ಮಜ್ಞಾನವೇ ಇಲ್ಲಿ ಹೇಳಿರುವ ಅಪರಿಮಿತ ಅರಿವು. ಬ್ರಹ್ಮ ಜ್ಞಾನದ ಒಂದು ವಿಶೇಷವೇನೆಂದರೆ, ಅದು ಅಂಗೈುಲ್ಲಿರುವ ನೆಲ್ಲಿಕಾಯಿ ಯಂತೆ ಇಡೀ ಬ್ರಹ್ಮಾಂಡವನ್ನೂ ಒಮ್ಮೆಲೇ ಗಮನಿಸಬಲ್ಲದು.) ‘ಆ ಪರಮಾಕಾಶದಲ್ಲಿ ಆದಿ, ಮಧ್ಯ, ಅಂತ್ಯ ಎಂಬ ಕಲ್ಪನೆಗಳಿಗೆ ಸ್ವಲ್ಪವೂ ಅವಕಾಶವಿಲ್ಲ. ಏಕೆಂದರೆ ಅದು ಅನಂತ. ಅಲ್ಲಿ ಆದಿ, ಮಧ್ಯ, ಅಂತ್ಯಗಳ ಕಲ್ಪನೆಯನ್ನು ಮಾಡಿದರೆ ಅದು ಬಂಜೆಯ ಮಗನನ್ನು ಕುರಿತು ಮಾತನಾಡಿದ ಹಾಗೆ. (ಬಂಜೆಗೆ ಮಗನಿರಲು ಸಾಧ್ಯವಿಲ್ಲ. ಮಗನಿದ್ದರೆ ಅವಳು ಬಂಜೆಯಲ್ಲ. ಆದ್ದರಿಂದ ಬಂಜೆಯ ಮಗ ಎಂಬುದೇ ಅತ್ಯಂತ ಅಸಂಭವ. ಹಾಗೆಯೇ ಪರಮಾಕಾಶದಲ್ಲಿ ಆದಿ, ಮಧ್ಯ, ಅಂತ್ಯಗಳ ಕಲ್ಪನೆ ಅತ್ಯಂತ ಅಸಂಭವ.) ಆ ಪರಮಾಕಾಶವನ್ನು ಪರಬ್ರಹ್ಮ, ಪರಮಾತ್ಮ ಎಂಬುದಾಗಿ ಕರೆಯುತ್ತಾರೆ. ಅದಕ್ಕೆ ಆರಂಭವಿಲ್ಲ. ಅದು ಕೇವಲ ತಾನೊಬ್ಬನೇ ಎಲ್ಲವನ್ನೂ ವ್ಯಾಪಿಸಿಕೊಂಡಿದೆ. ಅದು ಶಾಂತ ಸ್ವರೂಪವುಳ್ಳದ್ದು. ಅಲ್ಲಿ ಯಾವುದೇ ಭ್ರಾಂತಿ (ಅಜ್ಞಾನ) ಇಲ್ಲ. ದೈಶಿಕವಾಗಿ ಅಥವಾ ಕಾಲಿಕವಾಗಿ ಅದಕ್ಕೆ ಆದಿ, ಮಧ್ಯ, ಅಂತ್ಯಗಳು ಇಲ್ಲ. ಅದು ತನ್ನಲ್ಲೇ ತಾನು ನಿಂತುಕೊಂಡಿದೆ’. (ಇನ್ನೊಂದನ್ನು ಅವಲಂಬಿಸಿಕೊಂಡು ನಿಂತಿಲ್ಲ.) ‘ವಿಮಲವಾದ ಆ ಪರಮಾಕಾಶದ ಅನಂತತೆಯನ್ನು ಹೀಗೆ ವಿವರಿಸಬಹುದು - ಶಿಲೆಯು ಮೇಲಿಂದ ಅತಿ ವೇಗವಾಗಿ ಬಂದು ಕೆಳಗೆ ಬೀಳುತ್ತಿದ್ದರೆ ಮತ್ತು ಕೆಳಗಿನಿಂದ ಗರುಡ ರಾಜ ತನ್ನೆಲ್ಲ ಶಕ್ತಿಯಿಂದ ಊರ್ಧ್ವಮುಖವಾಗಿ ವೇಗವಾಗಿ ಹಾರುತ್ತಿದ್ದರೆ, ಇವೆರಡೂ ಒಂದಕ್ಕೆ ಇನ್ನೊಂದು ಭೇಟಿಯೇ ಆಗುವುದಿಲ್ಲ. (ಇಲ್ಲಿ ಮೇಲಿಂದ ಬೀಳುತ್ತಿರುವ ಶಿಲೆ ಮತ್ತು ಕೆಳಗಿಂದ ಮೇಲಕ್ಕೆ ಹೋಗುತ್ತಿರುವ ಗರುಡ, ಇಬ್ಬರೂ ಒಂದೇ ರೇಖೆಯಲ್ಲಿವೆ ಎಂಬುದನ್ನು ಮರೆಯಬಾರದು.) ಕಲ್ಪದ ಕೊನೆಯವರೆಗೆ ಶಿಲೆ ಬೀಳುತ್ತಿದ್ದರೂ, ಗರುಡ ಮೇಲಕ್ಕೆ ಹೋಗುತ್ತಿದ್ದರೂ, ಅವುಗಳ ಭೇಟಿ ಆಗುವುದಿಲ್ಲ. ಅಷ್ಟೇ ಏಕೆ, ಅವರಿಬ್ಬರನ್ನು ಭೇಟಿ ಮಾಡಿಸಲು ಗಾಳಿಯು ಅತ್ಯಂತ ವೇಗವಾಗಿ ಒಂದೇ ಸಮನಾಗಿ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಕಲ್ಪಾಂತ್ಯದ ವರೆಗೆ ಬೀಸುತ್ತಿದ್ದರೂ, ಅಂದರೆ ಶಿಲೆ ಮತ್ತು ಗರುಡ ಇವುಗಳಿಗೆ ವೇಗವನ್ನು ಹೆಚ್ಚಿಸಲು ಗಾಳಿಯು ಬೀಸುವ ಮೂಲಕ ಉತ್ತೇಜಕವಾಗಿದ್ದರೂ, ಈ ಶಿಲೆ ಮತ್ತು ಗರುಡ ಪರಸ್ಪರ ಭೇಟಿಯಾಗುವುದಿಲ್ಲ. ಅಷ್ಟು ಅಪರಿಚ್ಛಿನ್ನವಾದ ಅನಂತವಾದ ಆಕಾಶವಾಗಿದೆ ಅದು’.