ಬೆಂಗಳೂರು: ಗಣೇಶ ಚತುರ್ಥಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ದಿನವು ಗಣೇಶನ ಜನ್ಮ ದಿನವನ್ನು ಸೂಚಿಸುತ್ತದೆ ಹಾಗೂ ಭಕ್ತರು ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ವಿಘ್ನನಿವಾರಕನನ್ನು ಪೂಜಿಸಿದ ಈ ದಿನ ಚಂದ್ರನನ್ನು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಆದರೆ ಯಾಕೆ ಹೀಗೆ ಹೇಳಲಾಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ನಾವು ನಿಮ್ಮ ಗೊಂದಲಗಳಿಗೆ ತೆರೆ ಎಳೆಯುತ್ತೇವೆ.
ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೇವೆ. ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದ್ರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿದೆ. ಹೀಗೆ ಹೇಳಲು ಒಂದು ಮಹತ್ತರವಾದ ಕಾರಣವಿದೆ.
ಇದನ್ನೂ ಓದಿ: ಈ ವರ್ಷ ಗಣೇಶ ಚತುರ್ಥಿ ಯಾವಾಗ? ಪೂಜಾ ಮುಹೂರ್ತದ ಸಂಪೂರ್ಣ ವಿವರ ನಿಮಗಾಗಿ…
ಪಾರ್ವತಿ ಬೆವರಿನಿಂದ ರೂಪ ತಳೆದವನು ಗಣೇಶ. ಆದರೆ ಶಿವನ ಕೋಪಕ್ಕೆ ಗುರಿಯಾಗಿ ತಲೆ ಕಳೆದುಕೊಂಡಾಗ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆ ತಲೆಯನ್ನು ತಂದು ಗಣಪತಿಗೆ ಹಾಕಲಾಗುತ್ತದೆ. ಅತ್ಯಂತ ಬುದ್ಧಿವಂತ ಹಾಗೂ ವಿಘ್ನಹರ ಗಣೇಶ, ಚೌತಿಯ ದಿನ ತಾಯಿ ಗೌರಿಯನ್ನು ಭೂಲೋಕದಿಂದ ಕರೆದುಕೊಂಡು ಹೋಗುತ್ತಿದ್ದನು. ಇಲಿಯ ಮೇಲೆ ಕುಳಿತಿದ್ದ ಆತ ಚಂದ್ರಲೋಕಕ್ಕೆ ಬರುತ್ತಾನೆ. ಡೊಳ್ಳು ಹೊಟ್ಟೆಯ, ಆನೆ ಸೊಂಡಿಲಿನ ಗಣಪತಿಯನ್ನು ನೋಡಿ ಚಂದ್ರ ನಗ್ತಾನೆ. ಇದರಿಂದ ಕೋಪಗೊಂಡ ಗಣಪತಿ ಚಂದ್ರನಿಗೆ ಶಾಪ ನೀಡುತ್ತಾನೆ. ನೀನು ಕಪ್ಪಾಗು ಎಂದು ಶಾಪ ನೀಡುತ್ತಾನೆ. ಹಾಗಾಗಿಯೇ ಚಂದ್ರನಿಗೆ ಕಪ್ಪು ಕಲೆಗಳಿವೆ. ಚಂದ್ರನಿಗೆ ತಾನು ಸುಂದರವಾಗಿದ್ದೇನೆಂಬ ಅಹಂಕಾರವಿತ್ತು. ಗಣೇಶನ ಶಾಪದಿಂದ ಈ ಅಹಂಕಾರ ಇಳಿಯುತ್ತದೆ. ಚಂದ್ರ ಕ್ಷಮೆ ಕೇಳುತ್ತಾನೆ. ಇದಕ್ಕೆ ಪರಿಹಾರ ಹೇಳುವಂತೆ ಗಣೇಶನನ್ನು ಕೇಳ್ತಾನೆ. ಆಗ ಚಂದ್ರನನ್ನು ಕ್ಷಮಿಸುವ ಗಣೇಶ, ಸೂರ್ಯನ ಬೆಳಕು ಪಡೆದು ನೀನು ತಿಂಗಳಲ್ಲಿ ಒಂದು ದಿನ ನೀನು ಸಂಪೂರ್ಣ ಹೊಳೆಯುವೆ. ಆದ್ರೆ ಚೌತಿಯ ದಿನ ನಿನ್ನನ್ನು ಕ್ಷಮಿಸಿದ ದಿನವಾಗಿದ್ದು ಅದು ನಿನಗೆ ಸದಾ ನೆನಪಿರಲಿದೆ. ಈ ದಿನವನ್ನು ನೆನಪಿಸಿಕೊಂಡರೆ ಬೇರೆ ಯಾವುದೇ ವ್ಯಕ್ತಿ ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆ ಪಡುವುದಿಲ್ಲ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ನಿನ್ನನ್ನು ಯಾರು ನೋಡ್ತಾರೋ ಅವರು ಸುಳ್ಳು ಆರೋಪಕ್ಕೆ ಗುರಿಯಾಗುತ್ತಾರೆ ಎನ್ನುತ್ತಾನೆ. ಅಂದಿನಿಂದಲೂ ಚೌತಿ ದಿನ ಚಂದ್ರನನ್ನು ನೋಡಬಾರದು ಎನ್ನುವ ಶಾಸ್ತ್ರ ನಡೆದುಕೊಂಡು ಬಂದಿದೆ. ಕೆಲ ಗ್ರಂಥಗಳಲ್ಲಿ ಕಥೆ ಸ್ವಲ್ಪ ಭಿನ್ನವಾಗಿದೆ.
ಇದನ್ನೂ ಓದಿ: ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿವೆ. ಅಂತೆಯೇ ಗಣೇಶ ಹಬ್ಬಕ್ಕೂ ರೋಚಕ ಕಥೆಯಿದೆ. ಈ ದಿನದಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಒಂದ್ವೇಳೆ ನೀವೂ ಚೌತಿ ದಿನ ಚಂದ್ರನನ್ನು ನೋಡಿದರೆ ಪರಿಹಾರಕ್ಕೆ ನೀವು ನಂಬುವ ದೇವರ ಮೊರೆ ಹೋಗಿ ಪರಿಹಾರ ತಿಳಿದುಕೊಳ್ಳಿ.