Ganesh Chaturthi: ಗಣೇಶನಿಗೆ ಗರಿಕೆ ಹುಲ್ಲು ಯಾಕೆ ಇಷ್ಟ ಗೊತ್ತಾ?

Ganesh Chaturthi
Published on

ಬೆಂಗಳೂರು: ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂದು ಹೇಳುವುದನ್ನು ನಾವು ಹಾಗೂ ನೀವು ಕೇಳಿದ್ದೇವೆ. ಆದರೆ ಯಾಕೆ ಗರಿಕೆಯನ್ನು ಅರ್ಪಿಸಬೇಕು ಎನ್ನುವುದರ ಕುರಿತಾಗಿ ಮಾಹಿತಿ ಇಲ್ಲಿದೆ.

ಗರಿಕೆಯನ್ನು ಹೇಗೆ ಅರ್ಪಿಸಬೇಕು?: ಗರಿಕೆಯನ್ನು ಗಣೇಶನಿಗೆ ಅರ್ಪಿಸುವಾಗ ಮೂರು ಅಥವಾ ಐದು ಎಳೆಯನ್ನು ಹೊಂದಿರಬೇಕು. ಗರಿಕೆಯ ಮಧ್ಯದ ಎಸಳು ಗಣೇಶನನ್ನು ಆಕರ್ಷಿಸಿದರೆ, ಇತರ ಎರಡು ಎಸಳು ಶಿವ ಹಾಗೂ ಶಕ್ತಿಯನ್ನು ಆಕರ್ಷಿಸುತ್ತದೆ.

Ganesh Chaturthi

ಗಣೇಶನಿಗೆ 21 ಗರಿಕೆಯನ್ನು ನೀಡುವುದು ಕಡ್ಡಾಯ. ಈ 21 ಗರಿಕೆಯನ್ನು ಕಟ್ಟಿ, ನೀರಿನಲ್ಲಿ ಅದ್ದಿದ ನಂತರ ಗಣೇಶನಿಗೆ ಅರ್ಪಿಸಬೇಕು. ಗಣೇಶನನ್ನು ಗರಿಕೆಯಿಂದ ಅಲಂಕರಿಸುವಾಗ ಮುಖವನ್ನು ಹೊರತುಪಡಿಸಿ, ಇತರ ಭಾಗವನ್ನು ಗರಿಕೆಯಿಂದ ಮುಚ್ಚಬೇಕು. ಮೊದಲು ಪಾದವನ್ನು ಮುಚ್ಚಿ ನಂತರ ಇತರ ಭಾಗವನ್ನು ಗರಿಕೆಯಿಂದ ಅಲಂಕರಿಸುತ್ತಾ ಬರಬೇಕು.

ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

ಗರಿಕೆಯನ್ನು ಅರ್ಪಿಸುವುದರ ಕಾರಣಗಳು:

ಪೌರಾಣಿಕ ಕಾರಣ: ಒಮ್ಮೆ ಅನಲಾಸುರನೆಂಬ ರಾಕ್ಷಸನು ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದನು.  ದೇವತೆಗಳು ಗಣೇಶನ ಸಹಾಯದ ಮೊರೆ ಹೋದರು. ಗಣೇಶ ಹಾಗೂ ಅನಲಾಸುರನ ಮಧ್ಯೆ ಯುದ್ಧ ನಡೆದಾಗ, ಅನಲಾಸುರನು ಬೆಂಕಿಯುಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಕೋಪದಿಂದ ಗಣೇಶನು ಅಸುರನನ್ನು ಸಂಹಾರ ಮಾಡಲು ವಿರಾಟ್‌ ರೂಪ ತಾಳಿ ಅನಲಾಸುರನನ್ನು ನುಂಗಿ ಬಿಡುತ್ತಾನೆ. ಇದರಿಂದಾಗಿ ಗಣೇಶನ ದೇಹದಲ್ಲಿ ಉಷ್ಣಾಂಶವು ಅಧಿಕವಾಗಿ ಹೊಟ್ಟೆ ಊದಿಕೊಂಡು ಬಿಡುತ್ತದೆ. ದೇಹದ ಉಷ್ಣಾಂಶದಿಂದ ದೇಹಾಲಸ್ಯದಿಂದ ಸುಧಾರಿಸಕೊಳ್ಳುವುದಕ್ಕೆ ಗಣೇಶನು ಹರಸಾಹಸ ಪಡುತ್ತಿದ್ದನು. ದೇವತೆಗಳಾದ ಚಂದ್ರ, ವಿಷ್ಣು, ಶಿವ ಗಣೇಶನ ನೋವು ಕಡಿಮೆ ಮಾಡಲು ನಾನಾ ಉಪಾಯಗಳನ್ನು ಮಾಡಿದರೂ ಗಣೇಶನಿಗೆ ಹೊಟ್ಟೆನೋವು ಕಡಿಮೆಯಾಗಲಿಲ್ಲ. ಕೊನೆಗೆ ಋಷಿಮುನಿಗಳು 21 ಗರಿಕೆಯನ್ನು ಗಣೇಶನ ತಲೆಯ ಮೇಲಿಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಆವಿಯಾಗಿ ನೋವು ಕಡಿಮೆಯಾಗಿ, ಗಣೇಶನು ಗುಣಮುಖನಾಗುತ್ತಾನೆ.

ಅಂದಿನಿಂದ 'ಯಾರು ನನಗೆ ಗರಿಕೆಯಿಂದ ಅರ್ಚಿಸುತ್ತಾರೋ ಅವರ ಮೇಲೆ ಸದಾ ನನ್ನ ಆಶೀರ್ವಾದವಿರುತ್ತದೆ' ಎಂದು ಗಣೇಶನು ಹೇಳಿದನು. ಹಾಗಾಗಿ ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂಬ ನಂಬಿಕೆ ಬೆಳೆದು ಬಂದಿದೆ.

ಆಯುರ್ವೇದಕ್ಕನುಸಾರ ಕಾರಣ: ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.

21 ಗರಿಕೆ ಅರ್ಪಿಸಿದರೆ ಅದೃಷ್ಟ ಒಲಿಯುವುದು ಎಲ್ಲಾ ವಿಘ್ನಗಳು ಮಾಯವಾಗಿ ಜೀವನ ಸುಖಕರವಾಗಿರಲಿ ಎಂದು ವಿಘ್ನೇಶನನ್ನು ಪೂಜಿಸುತ್ತಾರೆ. ಗಣೇಶನಿಗೆ 21 ಗರಿಕೆಯನ್ನು ಅರ್ಪಿಸಿ ಪೂಜಿಸುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ.

ಗಣೇಶನಿಗೆ ಹೂ ಹೊಡೆದ ಗರಿಕೆಯನ್ನು ಅರ್ಪಿಸಬಾರದು, ಎಲೆಗಳು ಸ್ವಲ್ಪ ಒಣಗಿರುವ ಗರಿಕೆಯನ್ನು ಕೂಡ ಪೂಜೆಗೆ ಬಳಸಬಾರದು, ಇಂಥ ಗರಿಕೆಯಲ್ಲಿ ಜೀವಶಕ್ತಿಯ ಉಲ್ಲಾಸ ಕಡಿಮೆ ಇರುತ್ತದೆ, ಇದರಿಂದ ಗರಿಕೆಗೆ ದೇವತೆಗಳನ್ನು ಆಕರ್ಷಿಸುವವ ಶಕ್ತಿ ಸಾಮಾರ್ಥ್ಯ ಕೂಡ ಕಡಿಮೆ ಆಗುವುದು. ಆದ್ದರಿಂದ ಹಸಿರಾದ, ಎಳೆಯ ಗರಿಕೆಯನ್ನು ಮಾತ್ರ ಗಣಪನಿಗೆ ಅರ್ಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net