

ಸಾಗರ: ಕನ್ನಡ ಭಾಷೆ ಪಸರಿಸಲು ಮೊದಲು ಬುನಾದಿಯಾದದ್ದು ಸಾಗರ ಉಪ ವಿಭಾಗ. ಕದಂಬ ಸಾಮ್ರಾಜ್ಯದ ಮೂಲಕ ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಿದ್ದು ಇಲ್ಲಿಂದಲೇ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.
ಸಾಗರದ ಗಣಪತಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಗರಕ್ಕೆ ಆಗಮಿಸಿದ್ದ ಸುವರ್ಣ ಸಂಭ್ರಮ ರಥವನ್ನು ಸ್ವಾಗತಿಸಿ ಮಾತನಾಡಿದರು.
ಕನ್ನಡದ ಉಗಮ ಸ್ಥಳಕ್ಕೆ ಕನ್ನಡ ರಥ ಬಂದಿರುವುದು ವಿಶೇಷ. ಕನ್ನಡದ ಮೊದಲ ಸಾಮ್ರಾಜ್ಯ ಕದಂಬರು ನಮ್ಮ ಉಪವಿಭಾಗದಲ್ಲಿ ಜನ್ಮ ತಳೆದಿರುವುದು ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತದೆ. ಇದರ ಜತೆಗೆ ಕನ್ನಡದ ಎಲ್ಲ ಶಾಸನಗಳು ಸಿಕ್ಕಿರುವುದು ಸಾಗರ ತಾಲೂಕಿನ ಅಕ್ಕಪಕ್ಕದಲ್ಲಿಯೇ. ಆದ್ದರಿಂದ ಸಾಗರ ತಾಲೂಕು ಕನ್ನಡ ನಾಡಿಗೆ, ಭಾಷೆಗೆ, ನೀಡಿರುವ ಕೊಡುಗೆ ಅಮೂಲ್ಯ ಎಂದರು.
ಈ ಬಾರಿ ಕನ್ನಡ ರಾಜ್ಯೋತ್ಸವ ಅತ್ಯಂತ ವಿಶೇಷ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ರಥ ಎಲ್ಲ ತಾಲೂಕುಗಳಿಗೂ ಸಾಗುತ್ತಿದೆ. ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಉತ್ತರ ಕನ್ನಡಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಿಇಒ ಪರಶುರಾಮಪ್ಪ, ತಹಸೀಲ್ದಾರ್ ಚಂದ್ರಶೇಖರ್, ನಗರಸಭೆ ಪರಿಸರ ವಿಭಾಗದ ಎಇಇ ಮದನ್, ಸಮಾಜ ಕಲ್ಯಾಣ ಇಲಾಖೆಯ ಸುರೇಶ್, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ಮಧುಮಾಲತಿ, ಜಾಕೀರ್, ಲಕ್ಷ್ಮಣ ಸಾಗರ್, ಡಾ. ಕೆಳದಿ ವೆಂಕಟೇಶ್ ಜೋಯ್ಸ ಇತರರಿದ್ದರು.